ಅನುಭಾವ ತಪಸ್ಸನ್ನೂ ಮೀರಿದ ಸ್ಥಿತಿ: ಡಾ.ಚಿಂತಾಮಣಿ

karnataka sangha
ಕರ್ನಾಟಕ ಸಂಘದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ನೆಗವಾಡಿ ರಾಜಶೇಖರ ಪಾಟೀಲರ ಸಮಗ್ರ ಕವನಗಳ ಸಂಕಲನವನ್ನು ಡಾ.ಚಿಂತಾಮಣಿ ಕೊಡ್ಲೆಕೆರೆ ಬಿಡುಗಡೆ ಮಾಡಿದರು. ಎಂ.ಎನ್.ಸುಂದರರಾಜ್, ಪ್ರೊ.ಎಂ.ಆಶಾಲತಾ, ಉಷಾ ನಾಗರಾಜ್, ನೆಗವಾಡಿ ರಾಜಶೇಖರ ಪಾಟೀಲ್ ಉಪಸ್ಥಿತರಿದ್ದರು.
Published on

ಶಿವಮೊಗ್ಗ: ಅನುಭವ ಹಾಗೂ ಅನುಭಾವ ಎರಡೂ ಪದಗಳಲ್ಲಿ ಸಾಮ್ಯತೆ ಇರುವುದು ನಿಜ. ಆದರೆ ಎರಡರ ಅರ್ಥವೂ ಒಂದೇ ಅಲ್ಲ. ಅನುಭವ ಪ್ರಪಂಚವನ್ನು ಅರಿಯುವ ಪ್ರಯತ್ನವಾದರೆ, ಅನುಭಾವ ಎಂಬುದು ಪ್ರಪಂಚದ ಕರ್ತೃವನ್ನೇ ಹುಡುಕುವ ಯತ್ನ ಎಂದು ಸಾಹಿತಿ ಡಾ.ಚಿಂತಾಮಣಿ ಕೊಡ್ಲೆಕೆರೆ ವಿವರಿಸಿದರು.

ಕರ್ನಾಟಕ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಜ್ಯೋತಿ ಮುಟ್ಟಿದ ಬತ್ತಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಅನುಭಾವದ ಪರಿಕಲ್ಪನೆ, ವ್ಯಾಖ್ಯೆ, ಸಾಹಿತ್ಯದಲ್ಲಿ ಅನುಭಾವದ ಅಗತ್ಯ, ಪ್ರಭಾವ, ಅದರಿಂದ ಒದುಗರ ಮೇಲೆ ಉಂಟಾಗುವ ಪ್ರಭಾವ, ಕವಿಯ ದೃಷ್ಟಿಕೋನ ಮುಂತಾದ ವಿಷಯಗಳ ಕುರಿತು ಬೆಳಕು ಚೆಲ್ಲಿದರು.
ಅನುಭಾವ ಎಂಬುದು ಸಮಾದಿ ಸ್ಥಿತಿ. ಒಂದು ರೀತಿಯಲ್ಲಿ ಅದು ತಪಸ್ಸಿನಂತೆ ಅಥವಾ ಅದನ್ನೂ ಮೀರಿದಂತಾದ್ದು. ಶರಣರ ಕಾಲದಲ್ಲಿ ಮೂಡಿಬಂದ ಶಿವಾನುಭವವೇ ಮುಂದೆ ಶಿವಾನುಭಾವ ಹಾಗೂ ಅನುಭಾವವಾಗಿ ರೂಪಗೊಂಡಿರುವ ಸಾಧ್ಯತೆಗಳೂ ಇವೆ ಎಂದು ಅಭಿಪ್ರಾಯಪಟ್ಟರು.
ಬದುಕಿನ ಅವಸ್ಥೆಯನ್ನು ಅರಿಯುವುದು, ಜೀವನದ ಸತ್ಯವನ್ನು ಕಂಡುಕೊಳ್ಳಲು ಅನುಭವ ಅವಶ್ಯ. ಆದರೆ ನಮ್ಮ ಇರುವಿಕೆ, ಇಲ್ಲವೇ ಆಗುವಿಕೆಯ ಪ್ರಕ್ರಿಯೆ ನಡೆಸುವುದು ಇಲ್ಲವೇ ಅಂತಹ ಸ್ಥಿತಿಯೇ ಅನುಭಾವ. ಏಕಾಗ್ರತೆ, ಧ್ಯಾನದ ಮೂಲಕ ಪಡೆದ ಅನುಭವವೇ ಅನುಭಾವ ಎಂದು ಹೇಳಿದರು.
ಪ್ರಯೋಗ, ವಿಚಾರಕ್ಕೆ ನಿಲುಕದ್ದು: ಸೃಷ್ಟಿಯನ್ನು ಮೂರು ಬಗೆಯಲ್ಲಿ ಅರಿಯಲು ಸಾಧ್ಯವಿದೆ. ಮೊದಲನೆಯದ್ದು ವಿಚಾರವಾದ. ಇದರಲ್ಲಿ ಯಾವುದೇ ವಿಷಯಗಳ ಬಗ್ಗೆ ವಿಚಾರ ನಡೆಸಿ ಅದರ ಸಾಧಕ, ಬಾಧಕಗಳನ್ನು ಅರಿಯಬಹುದು. ಎರಡನೆಯದ್ದು ಪ್ರಯೋಗ. ವಿಚಾರವಾದದಿಂದಲೂ ಸಿಗದ ಸಮಾಧಾನವನ್ನು ಪ್ರಯೋಗದ ಮೂಲಕ ಪಡೆಯಬಹುದು. ಅದನ್ನು ಸ್ವತಃ ಮಾಡುವುದರಿಂದ ಒಪ್ಪಿಕೊಳ್ಳುವುದು ಅಥವಾ ಒಪ್ಪದೇ ಇರುವುದು ಸಾಧ್ಯವಾಗುತ್ತದೆ. ಮೂರನೆಯದ್ದೇ ಅನುಭಾವ. ವಿಚಾರ ಹಾಗೂ ಪ್ರಯೋಗದಿಂದ ಸ್ಪಷ್ಟಪಡದ ತರ್ಕಕ್ಕೆ ನಿಲುಕದ್ದೇ ಅನುಭಾವ ಎಂದು ಡಾ.ಚಿಂತಾಮಣಿ ಕೊಡ್ಲೆಕೆರೆ ಅಭಿಪ್ರಾಯಪಟ್ಟರು.
ಸಮರ್ಪಕ ಭಾಷೆ ಅವಶ್ಯ: ನಾನು ಎಂಬ ಅಹಂ ಹಾಗೂ ಜಗತ್ತಿನ ನಡುವೆ ನಾವು ಬಹುದೂರ ಸಾಗಿದ್ದೇವೆ. ಅದರಲ್ಲಿ ಅನೇಕ ಸಂಗತಿಗಳು ನಮ್ಮ ತರ್ಕಕ್ಕೂ ಸಿಗುವುದಿಲ್ಲ. ಇನ್ನು ಸಾಹಿತ್ಯದಲ್ಲಿ ಅನುಭಾವಕ್ಕೆ ಪೂರಕವಾದ ಸಂಗತಿಗಳೆಂದರೆ ಅದು ಶುದ್ಧ ತರ್ಕ ಹಾಗೂ ಸಮರ್ಪಕ ಭಾಷೆ. ಕೆಲವೊಮ್ಮೆ ಸಾಹಿತ್ಯದಲ್ಲಿ ಅತಿಶಯ ಎನಿಸುವ ಪದಗಳ ಬಳಕೆಯೂ ಅನಿವಾರ್ಯ. ಅನುಭಾವದ ಕುರಿತು ವಿಸ್ತೃತವಾದ ಚರ್ಚೆಗಳು ನಡೆದಿವೆ. ಅನುಭು ಎಂಬ ಸಂಸ್ಕೃತ ಪದದ ಕನ್ನಡ ಅನುವಾದ ಅರಿವು, ರುಚಿ ನೋಡುವುದು, ಗ್ರಹಿಸುವುದು ಎಂಬುದಾಗಿದೆ. ಹೀಗಾಗಿ ಅನುಭಾವ ಎಂಬ ಪದ ರೂಪುತಳೆದಿರಲೂ ಸಾಕು ಎಂದು ಡಾ.ಚಿಂತಾಮಣಿ ಕೊಡ್ಲೆಕೆರೆ ಹೇಳಿದರು.
ನೆಗವಾಡಿ ಕವನ ಸಂಕಲನ: ಕೃಷಿಯಲ್ಲಿ ತೊಡಗಿಸಿಕೊಂಡು, ರೈತ ಹೋರಾಟದ ಜತೆಗೆ ಕವನ ರಚನೆಯಲ್ಲೂ ತೊಡಗಿರುವ 80 ಹರೆಯದ ನೆಗವಾಡಿ ರಾಜಶೇಖರ ಪಾಟೀಲರ ಕ್ರಿಯಾಶೀಲತೆ ಎಲ್ಲರೂ ಮೆಚ್ಚುವಂತಾದ್ದು ಎಂದು ಕರ್ನಾಟಕ ಸಂಘದ ಸದಸ್ಯ ಉಷಾ ನಾಗರಾಜ್ ಬಣ್ಣಿಸಿದರು.
ರಾಜಶೇಖರ ಪಾಟೀಲರ ಸಮಗ್ರ ಕವನಗಳ ಸಂಕಲನ ಕುರಿತು ಮಾತನಾಡಿದ ಅವರು, ಸ್ವರಚಿತ ಕವನಗಳು ಮಾತ್ರವಲ್ಲದೇ ದೇಶ, ವಿದೇಶಗಳ ಪ್ರಖ್ಯಾತ ಕವಿಗಳು ರಚಿಸಿರುವ ಕವನಗಳ ಭಾವಾನುವಾದವನ್ನು ಕನ್ನಡಕ್ಕೆ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇವರಿಗೆ ಸೊರಬ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವೂ ಸಂದಿದೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಪ್ರೊ.ಎಂ.ಆಶಾಲತಾ, ಸದಸ್ಯೆ ಉಷಾ ನಾಗರಾಜ್, ಕವಿ ನೆಗವಾಡಿ ರಾಜಶೇಖರ ಪಾಟೀಲ್ ಉಪಸ್ಥಿತರಿದ್ದರು.
ಕವಿ ನೆಗವಾಡಿ ರಾಜಶೇಖರ ಪಾಟೀಲ್ ಅವರ ಸಮಗ್ರ ಕವನಗಳ ಸಂಕಲವನ್ನು ಡಾ.ಚಿಂತಾಮಣಿ ಕೊಡ್ಲಕೆರೆ ಬಿಡುಗಡೆ ಮಾಡಿದರು ಕವನ ಸಂಕಲದ ಕುರಿತು ಉಷಾ ನಾಗರಾಜ್ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net