

ಬೆಳಗಾವಿ: ಶರಣರ ಅನುಭಾವದ ಪ್ರವಚನದ ನುಡಿಗಳು ಮನಸಿನಲ್ಲಿನ ದುಃಖ, ದೋಷ, ಆಸೆ, ಆಮಿಷ ಸೇರಿ ಅರಿಷಡ್ವರ್ಗಗಳನ್ನು ದೂರಗೊಳಿಸಿ ಮನಸ್ಸನ್ನು ಪರಿಶುದ್ಧಗೊಳಿಸುತ್ತವೆ. ಲೌಕಿಕ ಸುಖ ಅಲ್ಪಸುಖವಾದರೆ, ಅನುಭಾವದಿಂದ ದೊರೆತ ಸುಖ ಶಾಶ್ವತವಾದದ್ದು. ಇದು ವ್ಯಕ್ತಿಗೆ ತಾನು ಯಾರೆಂಬುದನ್ನು ತಿಳಿಸುತ್ತದೆ. ಅನುಭಾವ ಎಂಬುವುದು ಆತ್ಮದ ವಿದ್ಯೆಯಾಗಿದೆ ಎಂದು ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶಿವಬಸವ ನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಆರ್.ಎನ್. ಶೆಟ್ಟಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಡಾ. ಶಿವಬಸವ ಮಹಾಸ್ವಾಮೀಜಿ ಅವರ 135ನೇ ಜಯಂತ್ಯುವ ಅಂಗವಾಗಿ ಬುಧವಾರ ಆಯೋಜಿಸಿದ್ದ ಶರಣರ ಅನುಭವಾಮೃತ ಪ್ರವಚನ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಬಂಡವಾಳಶಾಹಿಗಳು ಈ ಜನ್ಮದಲ್ಲಿ ದುಡಿದರೆ ಮುಂದಿನ ಜನ್ಮದಲ್ಲಿ ಅದರ ಫಲ ದೊರೆಯುತ್ತದೆ ಎಂದು ಧರ್ಮ, ದೇವರು ಹಾಗೂ ಪುನರ್ಜನ್ಮದ ಹೆಸರಿನಲ್ಲಿ ಜನರ ಶೋಷಣೆ ಮಾಡುತ್ತಿದ್ದರು. ಆದರೆ ಬಸವಾದಿ ಶರಣರು ಈ ಶೋಷಣೆ ತಡೆಗಟ್ಟಿ ಗುರು, ಲಿಂಗ, ಜಂಗಮ, ಭಕ್ತ ಸೇರಿ ಎಲ್ಲರೂ ಸತ್ಯ ಶುದ್ಧ ಕಾಯಕ ಮಾಡಬೇಕು. ದುಡಿದು ತಿನ್ನದವರು ಭಕ್ತರೇ ಅಲ್ಲ ಎಂದು ತಿಳಿಸಿ, ಶ್ರಮ ಸಂಸ್ಕೃತಿ ಪರಿಚಯಿಸಿ ಮಾನವ ಬದುಕನ್ನು ಹಸನುಗಳಿಸುವ ಕಾರ್ಯ ಮಾಡಿದರು ಎಂದರು. ಶ್ರೀಮಠದ ಧಾರ್ಮಿಕ ಕಾರ್ಯಕ್ರಮಗಳಿಗೆ ಆರ್.ಎನ್. ಶೆಟ್ಟಿ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಾಣವಾದ ನೂತನ ಅನುಭವ ಮಂಟಪವನ್ನು ಶ್ರೀಗಳು ಉದ್ಘಾಟಿಸಿದರು.
ಮಣಕವಾಡ ದೇವಮಂದಿರದ ಅಭಿನವ ಮೃತ್ಯುಂಜಯ ಸ್ವಾಮೀಜಿ ಪ್ರವಚನ ನೀಡಿ, ಇತ್ತೀಚಿಗೆ ಕೆಲವು ಮಠಗಳು ಬಸವ ತತ್ತ್ವವನ್ನು ತೊಡುವ ಬಟ್ಟೆಯೆಂದು ಭಾವಿಸಿ, ಅಗತ್ಯವಿದ್ದಾಗ ಧರಿಸಿ ಅದನ್ನು ಬದಲಾಯಿಸುತ್ತಿರುತ್ತಾರೆ. ಆದರೆ ನಾಗನೂರು ರುದ್ರಾಕ್ಷಿ ಮಠವು ಬಸವ ತತ್ತ್ವವನ್ನು ತನ್ನ ಅಂಗವೆಂದು ಭಾವಿಸಿ, ನಿತ್ಯ ಅದರ ಅನುಷ್ಠಾನದಲ್ಲಿ ಕಾರ್ಯತತ್ಪರವಾಗಿದೆ ಎಂದರು. ಬೆಳ್ಳೇರಿಯ ಬಸವಾನಂದ ಸ್ವಾಮೀಜಿ ಮಾತನಾಡಿ, ಭಕ್ತ ಮತ್ತು ದೇವರನ್ನು ಬೆಸೆಯುವ ಸೇತುವೆಯೇ ಭಕ್ತಿ. ಇದು ಅರಿವು, ಆಚಾರ ಮತ್ತು ಅನುಭಾವಗಳನ್ನೊಳಗೊಂಡಿದೆ ಎಂದು ಹೇಳಿದರು.
ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ನೇತೃತ್ವ ವಹಿಸಿದ್ದರು. ತೋಂಟದಾರ್ಯ ವಿರಕ್ತಮಠ ಅರಳಿಕಟ್ಟಿಯ ಶಿವಮೂರ್ತಿ ಸ್ವಾಮೀಜಿ, ಜುಂಜರವಾಡದ ಬಸವರಾಜ ಶರಣರು ವೇದಿಕೆಯಲ್ಲಿದ್ದರು. ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಎಲ್. ಪಾಟೀಲ ಸ್ವಾಗತಿಸಿದರು. ಪ್ರಾಧ್ಯಾಪಕ ಎ.ಕೆ. ಪಾಟೀಲ ನಿರೂಪಿಸಿದರು. ಪ್ರಾಧ್ಯಾಪಕ ಮಂಜುನಾಥ ಶರಣಪ್ಪನವರ ವಂದಿಸಿದರು.
ಇದಕ್ಕೂ ಮುನ್ನ ಶ್ರೀನಗರ ಉದ್ಯಾನವನದಿಂದ ರುದ್ರಾಕ್ಷಿ ಮಠದವರೆಗೆ ಶರಣರ ವಚನಗಳ ಕಟ್ಟುಗಳನ್ನು ಹೊತ್ತ ಭವ್ಯ ಮೆರವಣಿಗೆ ನಡೆಯಿತು. ಬಾಲಕರು ಶರಣರ ವೇಷ ಧರಿಸಿ ಗಣ್ಯರನ್ನು ಸ್ವಾಗತಿಸಿದ್ದು ಆಕರ್ಷಣೀಯವಾಗಿತ್ತು.