ನಟಿ ಅನು ಪೂವಮ್ಮಗೆ ಕಿರಿಕಿರಿ ತಂದ ಪತಿಯ ನಕಲಿ ಇನ್‌ಸ್ಟಾ ಖಾತೆ!

Anu-poonamma-to-tie-knot-with-Aiyappa_1200x900
Published on

ಬೆಂಗಳೂರು: ಸ್ಯಾಂಡಲ್‌ವುಡ್ ಹಾಗೂ ಕಿರುತೆರೆ ನಟಿ ಅನು ಪೂವಮ್ಮಗೆ ಅವರ ಪತಿಯ ನಕಲಿ ಇನ್‌ಸ್ಟ್ಟಾಗ್ರಾಂ ಖಾತೆಯಿಂದ ಕಿರಿಕಿರಿಯಾಗುತ್ತಿದೆ. ಈ ವಿಷಯವನ್ನು ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಪೂವಮ್ಮ ಅವರ ಪತಿ ಎನ್.ಸಿ. ಅಯ್ಯಪ್ಪ ಅವರು ಕ್ರಿಕೆಟ್‌ಪಟು. ಜತೆಗೆ ಕನ್ನಡ ಬಿಗ್‌ಬಾಸ್ -3ರ ಸೀಸನ್‌ನಲ್ಲಿ ಭಾಗವಹಿಸಿದ್ದವರು. ಅವರು ಕೂಡ ಅನು ಅವರಷ್ಟೇ ಫ್ಯಾನ್ ಫಾಲೋಯಿಂಗ್ ಹೊಂದಿರುವವರು. ಆದರೆ ಇತ್ತೀಚೆಗೆ ಅನು ಅವರಿಗೆ ಫೋನ್ ಮಾಡುತ್ತಿದ್ದ ಕೆಲವು ಪರಿಚಿತರು ‘‘ನಿಮ್ಮ ಪತಿ ಇನ್‌ಸ್ಟಾಗ್ರಾಂನಿಂದ ಏನೇನೋ ಮೆಸೇಜ್ ಕಳಿಸುತ್ತಿದ್ದಾರೆ’’ ಎಂದು ದೂರು ಹೇಳಿದ್ದರು.

ಅದರಿಂದ ಬೇಸರಗೊಂಡ ಅನು ಪೂವಮ್ಮ ಚೆಕ್ ಮಾಡಿದರೆ, ಅದು ಅವರ ಪತಿಯ ಇನ್‌ಸ್ಟಾ ಖಾತೆಯಾಗಿರಲಿಲ್ಲ. ಬದಲಿಗೆ ಬೇರೆ ಯಾರೋ ಅಪರಿಚಿತರು ಅಯ್ಯಪ್ಪ ಅವರ ಹೆಸರಿನಲ್ಲಿ ತೆರೆದ ಖಾತೆ ಅದಾಗಿತ್ತು. ಕೂಡಲೇ ಆ ನಕಲಿ ಖಾತೆಯ ಸ್ಕ್ರೀನ್‌ಶಾಟ್ ತೆಗೆದ ಅನು ಪೂವಮ್ಮ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಾಕಿದ್ದಾರೆ. ‘‘ನನ್ನ ಪತಿಯ ಹೆಸರಿನಲ್ಲಿ ಯಾರೋ ಇನ್‌ಸ್ಟಾ ಖಾತೆ ತೆರೆದು ನನ್ನ ಸ್ನೇಹಿತೆಯರಿಗೆ, ಪರಿಚಿತರಿಗೆ ಏನೇನೋ ಮೆಸೇಜ್ ಕಳಿಸುತ್ತಿದ್ದಾರೆ. ಈ ಖಾತೆಯಿಂದ ಯಾರಿಗಾದರೂ ಮೆಸೇಜ್ ಬಂದರೆ ನಿಜವೆಂದು ಪರಿಗಣಿಸಬೇಡಿ. ಆ ಖಾತೆಯನ್ನು ಬ್ಲಾಕ್ ಮಾಡಿ’’ ಎಂದು ಮನವಿ ಮಾಡಿದ್ದಾರೆ.

ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಅನು ಪೂವಮ್ಮ ಮತ್ತು ಎನ್.ಸಿ. ಅಯ್ಯಪ್ಪ 2018ರಲ್ಲಿ ಮದುವೆಯಾಗಿದ್ದಾರೆ. ಹಲವು ಕನ್ನಡ ಚಲನಚಿತ್ರಗಳಲ್ಲಿ ನಟಿಸಿರುವ ಅನು, ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಗಾಗಿ ಆ ಧಾರಾವಾಹಿಯಿಂದ ಹಿಂದೆ ಸರಿದರು. ‘ಅಗ್ನಿಸಾಕ್ಷಿ’ಯಲ್ಲಿ ಒಂದು ಪಾತ್ರ ಮಾಡಿದ್ದ ಅವರು ಈಗ ‘ನಂದಿನಿ-2’ರಲ್ಲಿ ದೇವಸೇನಾ ಪಾತ್ರ ನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net