

ಮೂಲ್ಕಿ: ಕೊಲಕಾಡಿ ಬಳಿ ದೈವದ ಮೊಗ, ಮೂರ್ತಿ ಮತ್ತಿತರ ಪರಿಕರ ಆಲದ ಮರದಡಿ ಪತ್ತೆಯಾಗಿದ್ದು, ಸುಮಾರು 6 ಶತಮಾನ ಇತಿಹಾಸ ಇರುವ ವಸ್ತುಗಳಾಗಿವೆ ಎಂದು ತಿಳಿದು ಬಂದಿದೆ.
ಗುಜುರಿ ವ್ಯಾಪಾರಿಗೆ ಮೂರ್ತಿ ಸಾಗಿಸಲು ಆಗಲೇ ಇಲ್ಲ: ಈ ಸ್ಥಳದಲ್ಲಿ ಹಿಂದೆ ದೈವಸ್ಥಾನಗಳಿದ್ದು, ಆರಾಧನೆಯೂ ನಡೆಯುತ್ತಿತ್ತೆನ್ನಲಾಗಿದೆ. ಕಾಲ ಕಳೆದಂತೆ ಪಾಳು ಬಿದ್ದಿದ್ದು, ಇಲ್ಲಿನ ಶಕ್ತಿಗಳಾದ ಪಿಲಿಚಂಡಿ, ನಂದಿಗೋಣ ಹಾಗೂ ಇತರ ದೈವಗಳ ಮೊಗಗಳು ಮಂಚ ಹಾಗೂ ಪರಿಕರಗಳು ಪಾಳು ಬಿದ್ದಿದ್ದವು. ಸ್ಥಳೀಯರೊಬ್ಬರ ಪ್ರಕಾರ ಕೆಲವರ್ಷಗಳ ಹಿಂದೆ ಗುಜುರಿ ವ್ಯಾಪಾರಿಯೊಬ್ಬರು ಈ ಪರಿಕರಗಳನ್ನು ಸಾಗಾಟ ನಡೆಸಲು ಯತ್ನಿಸಿದಾಗ ಇದ್ದಕ್ಕಿದ್ದಂತೆಯೇ ಪರಿಕರಗಳು ಭಾರವಾಗಿ ಕೊಂಡು ಹೋಗಲು ಆಗದೆ ವಿಫಲರಾಗಿ ವಾಪಸ್ ತಂದಿಟ್ಟಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ಹುಲಿರಾಯ ನೇಮ ವೀಕ್ಷಿಸುತ್ತಿದ್ದ ಸ್ಥಳ: ಊರಿಗೆ ಬಂದಿರುವ ತೊಂದರೆ, ದುರಿತ ನಿವಾರಿಸಲು ಈ ಕ್ಷೇತ್ರ ಜೀರ್ಣೋದ್ಧಾರವಾಗಬೇಕು ದೈವದ ಪರಿಕರಗಳು ಅಲ್ಲಿಯೇ ಇವೆ ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಕಾರಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಪರಿಕರಗಳು ಲಭ್ಯವಾಗಿದೆ. ದೈವದ ಪರಿಕರಗಳು ಸಿಕ್ಕಿರುವ ಜಾಗದಲ್ಲಿ ಬೃಹದಾಕಾರದ ಆಲದ ಮರ ಇದೆ. ಸ್ವಲ್ಪ ಮುಂದಕ್ಕೆ ಪಿಲಿಕಟ್ಟೆ ಎನ್ನುವ ಕಟ್ಟೆ ಇದ್ದು, ದೈವದ ನೇಮೋತ್ಸವ ನಡೆಯುವಾಗ ಹುಲಿ ಬಂದು ಕಟ್ಟೆಯಲ್ಲಿ ಕುಳಿತು ಯಾರಿಗೂ ತೊಂದರೆ ಕೊಡದೆ ನೇಮೋತ್ಸವ ನೋಡಿ ಹೋಗುತ್ತಿತ್ತು ಎನ್ನಲಾಗುತ್ತಿದೆ. ಹಾಗೆಯೇ ಸ್ಥಳದಲ್ಲಿ ಪುರಾತನ ಬಾವಿಯೊಂದು ಪತ್ತೆಯಾಗಿದೆ. ಇತ್ತೀಚೆಗೆ ಬಳಕುಂಜೆಯಲ್ಲಿ ದೈವದ ಪರಿಕರಗಳು ಪತ್ತೆಯಾಗಿತ್ತು. ಇದೀಗ ಕೊಲಕಾಡಿ ಪರಿಸರಕ್ಕೆ ಅನೇಕ ಕುತೂಹಲಿಗರು ಭೇಟಿ ನೀಡುತ್ತಿದ್ದಾರೆ.
ಕೊಲಕಾಡಿ ಶ್ರೀ ಕುಂಜಾರುಗಿರಿ ದೇವಳದ ಅರ್ಚಕ ಶ್ರೀಕಾಂತ್ ಭಟ್ ನೇತೃತ್ವದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಿನಾಥ ಪಡಂಗ, ಸದಸ್ಯರಾದ ಗುಣೇಶ್ ಶೆಟ್ಟಿ ಭೇಟಿ ನೀಡಿ ಜೀರ್ಣೋದ್ಧಾರ ಮಾಡುವ ಪ್ರಸ್ತಾಪದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಪತ್ತೆಯಾದ ದೈವದ ಪರಿಕರಗಳಿಗೆ ಹಾಗೂ ಇತಿಹಾಸ ಪ್ರಸಿದ್ಧ ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನಕ್ಕೂ ಸಂಬಂಧವಿರಬಹುದು. ಈ ವಿಚಾರದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ದೈವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು.
ಗುಣೇಶ್ ಶೆಟ್ಟಿ, ಟ್ರಸ್ಟಿ, ಕೊಲಕಾಡಿ ಕುಂಜಾರುಗಿರಿ ದೇವಳ