

ಭರತ್ ಶೆಟ್ಟಿಗಾರ್, ಮಂಗಳೂರು
ಕೋವಿಡ್ ಟೆಸ್ಟ್ ಫಲಿತಾಂಶವನ್ನು ಶೀಘ್ರ ಪಡೆಯಬಹುದಾದ ಆ್ಯಂಟಿಜನ್ ಟೆಸ್ಟ್ ದ.ಕ.ಜಿಲ್ಲೆಯಲ್ಲಿ ಸೋಮವಾರದಿಂದ ಆರಂಭ ಗೊಳ್ಳಲಿದೆ. ಜಿಲ್ಲೆಗೆ 3,500 ಆ್ಯಂಟಿಜನ್ ಕೋವಿಡ್ ಟೆಸ್ಟ್ ಕಿಟ್‌ಗಳು ಬಂದಿದ್ದು, ಮಂಗಳೂರಿನ ಆಯ್ದ ಪ್ರಕರಣಗಳಲ್ಲಿ ಆರೋಗ್ಯ ಇಲಾಖೆ ಈ ಪರೀಕ್ಷೆ ನಡೆಸಲು ಮುಂದಾಗಿದೆ.
ಕರೊನಾ ಲ್ಯಾಬ್‌ಗಳಲ್ಲಿ ನಡೆಸಲಾಗುವ ಟೆಸ್ಟ್‌ನಲ್ಲಿ ವರದಿ ಸಿಗಲು ಕನಿಷ್ಠ ಎರಡು ದಿನ ಬೇಕಾಗುತ್ತದೆ. ಆ್ಯಂಟಿಜನ್ ಟೆಸ್ಟ್‌ನಲ್ಲಿ 15-20 ನಿಮಿಷದಲ್ಲಿ ವರದಿ ಕೈ ಸೇರಲಿದೆ. ಆದರೆ ಎಲ್ಲರಿಗೂ ಈ ಟೆಸ್ಟ್ ಮಾಡುವುದಿಲ್ಲ. ವಿದೇಶದಿಂದ ಬಂದು ಹೋಟೆಲ್ ಕ್ವಾರಂಟೈನ್‌ನಲ್ಲಿರುವವರು, ಹಲವು ರೋಗಗಳಿಂದ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು, ಸಾರಿ(ಎಸ್‌ಎಎಆರ್‌ಐ) ಪ್ರಕರಣಗಳಲ್ಲಿ ಈ ಟೆಸ್ಟ್ ಹೆಚ್ಚು ಅನುಕೂಲ ಎಂದು ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಡಾ.ರತ್ನಾಕರ್ ’ವಿಜಯವಾಣಿ’ಗೆ ತಿಳಿಸಿದ್ದಾರೆ.
ಹೇಗೆ ನಡೆಸಲಾಗುತ್ತೆ ಪರೀಕ್ಷೆ?
ಕೋವಿಡ್-19 ಆ್ಯಂಟಿಜನ್ ಟೆಸ್ಟ್‌ಗೆ ವೈದ್ಯರು, ಗಂಟಲ ದ್ರವ ತೆಗೆದು ಕಿಟ್‌ನಲ್ಲಿರುವ ದ್ರಾವಣಕ್ಕೆ ಹಾಕುತ್ತಾರೆ. ಗಂಟಲ ದ್ರವದಲ್ಲಿ ಕರೊನಾ ವೈರಸ್ ಇದ್ದರೆ, ಇದರಿಂದ ಶಕ್ತಿ ಕಳೆದುಕೊಳ್ಳುತ್ತದೆ. ಟೆಸ್ಟ್ ಮಾಡಲು ಇರುವ ಸ್ಟ್ರಿಪ್‌ಗೆ ದ್ರಾವಣದ ಕೆಲವು ಹನಿಗಳನ್ನು ಹಾಕಲಾಗುತ್ತದೆ. ಈ ಸ್ಟ್ರಿಪ್‌ನಲ್ಲಿ ಕೃತಕ ಆ್ಯಂಟಿಬಾಡಿ ಅಂಶಗಳಿದ್ದು, ಕರೊನಾ ಪಾಸಿಟಿವ್ ಎಂದಾದರೆ 15 ನಿಮಿಷದಲ್ಲಿ ಕಿಟ್‌ನಲ್ಲಿ ಕೆಂಪು ಬಣ್ಣದ ಗೆರೆಗಳು ಕಾಣಿಸಿಕೊಳ್ಳುತ್ತವೆ. ಗೆರೆಗಳು ಬಾರದಿದ್ದರೆ ನೆಗೆಟಿವ್ ಎಂದು ಅರ್ಥ.
ನೆಗೆಟಿವ್ ಬಂದರೆ ಲ್ಯಾಬ್ ಟೆಸ್ಟ್ ಆ್ಯಂಟಿಜನ್ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದರೆ ಪಾಸಿಟಿವ್ ಎಂದೇ ಪರಿಗಣಿಸಲಾಗುತ್ತದೆ. ಆದರೆ ಶೀತ, ಜ್ವರ, ಕೆಮ್ಮು ಮೊದಲಾದ ಕರೊನಾ ಲಕ್ಷಣಗಳು ರೋಗಿಗಿದ್ದು ನೆಗೆಟಿವ್ ಬಂದರೆ ಮತ್ತೆ ಲ್ಯಾಬ್ ಟೆಸ್ಟ್(ಆರ್‌ಟಿ-ಪಿಸಿಆರ್) ಅನಿವಾರ್ಯ. ಇದರಲ್ಲೂ ನೆಗೆಟಿವ್ ಬಂದರೆ ಮಾತ್ರ ವ್ಯಕ್ತಿಗೆ ಕರೊನಾ ನೆಗೆಟಿವ್ ಎಂದು ವರದಿ ನೀಡಲಾಗುತ್ತದೆ ಎನ್ನುತ್ತಾರೆ ತಜ್ಞರು.
ವೇಗವಾಗಿ ವರದಿ ಸಿಗಬೇಕಾದ ಪ್ರಕರಣಗಳಲ್ಲಿ ಆ್ಯಂಟಿಜನ್ ಕೋವಿಡ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಗಂಟಲ ದ್ರವ ತೆಗೆದು ವರದಿ ಲಭಿಸಲು ತುಂಬ ತಡವಾಗುತ್ತದೆ ಎನ್ನುವ ದೂರುಗಳು ಬರುತ್ತಿವೆ. ಈ ಟೆಸ್ಟ್ ಮಾಡುವುದರಿಂದ ಆರೋಗ್ಯ ಇಲಾಖೆಗೆ ಹೆಚ್ಚು ಅನುಕೂಲವಿದೆ. ಡಾ.ರತ್ನಾಕರ್, ದ.ಕ ಜಿಲ್ಲಾ ಆರೋಗ್ಯಾಧಿಕಾರಿ(ಪ್ರಭಾರ)