ವಾರಿಯರ್ಸ್‌ಗೆ ಆ್ಯಂಟಿಬಾಡಿ ಟೆಸ್ಟ್

Corona
Published on

ವೇಣುವಿನೋದ್ ಕೆ.ಎಸ್. ಮಂಗಳೂರು

ಕರಾವಳಿ ಜಿಲ್ಲೆಗಳಲ್ಲಿ ಕೋವಿಡ್ ಸೇರಿದಂತೆ ಆರೋಗ್ಯ ಸೇವೆಯ ಮುಂಚೂಣಿ ಕಾರ್ಯಕರ್ತರ ಮೇಲೆ ಕೋವಿಡ್ ಬೀರಿದ ಪರಿಣಾಮವೇನು ಎಂಬುದನ್ನು ಅರಿಯಲು ಆರೋಗ್ಯ ಇಲಾಖೆ ರ‌್ಯಾಪಿಡ್ ಆ್ಯಂಟಿಬಾಡಿ ಪರೀಕ್ಷೆ ಮೊರೆ ಹೋಗಿದೆ.

ಆರೋಗ್ಯ ಕಾರ್ಯಕರ್ತರು ಸಾಮಾನ್ಯವಾಗಿ ವೈರಸ್‌ಗೆ ಹೆಚ್ಚು ಗುರಿಯಾಗುವ ಸಾಧ್ಯತೆ ಇರುತ್ತದೆ. ಅವರಲ್ಲಿ ಕೆಲವರಿಗೆ ಪಾಸಿಟಿವ್ ಬಂದಿರುವುದು ಲಕ್ಷಣಗಳಿಂದ ಗೊತ್ತಾಗಿರುತ್ತದೆ, ಅಂಥವರಿಗೆ ಹಿಂದೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿರಬಹುದು. ಆದರೆ ಬಹುತೇಕರಿಗೆ ಲಕ್ಷಣ ಗೊತ್ತಾಗಿರುವುದಿಲ್ಲ, ಅಂತಹ ಕಾರ್ಯಕರ್ತರಿಂದಲೇ ಜನರಿಗೆ ಪಸರಿಸುವ ಸಾಧ್ಯತೆ ಇದೆ ಅಥವಾ ಮುಂದೆ ದಿಢೀರ್ ಸೋಂಕು ಹೆಚ್ಚಲೂಬಹುದು, ಅದಕ್ಕಾಗಿ ಈಗ ರ‌್ಯಾಂಡಮ್ ಆಗಿ ಆ್ಯಂಟಿಬಾಡಿ ಟೆಸ್ಟ್ ಮಾಡಲಾಗುತ್ತಿದೆ.

ಒಂದು ವಾರದಿಂದ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಗೆ 1,200, ಉಡುಪಿ ಜಿಲ್ಲೆಗೆ 1400 ಕಿಟ್ ಬಂದಿವೆ. ರ‌್ಯಾಪಿಡ್ ಆ್ಯಂಟಿಜನ್ ಕಿಟ್‌ಗಳಲ್ಲಿ ಗಂಟಲ ದ್ರವ ಮಾದರಿ ತೆಗೆದರೆ ಆ್ಯಂಟಿಬಾಡಿ ಟೆಸ್ಟ್‌ಗೆ ರಕ್ತದ ಮಾದರಿ ತೆಗೆಯಲಾಗುತ್ತದೆ.

ದೇಹದಲ್ಲಿ ಕೋವಿಡ್ ವೈರಸ್‌ಗೆ ಪ್ರತಿಕಾಯ ಸೃಷ್ಟಿಯಾಗಿದೆಯೇ ಎಂಬುದನ್ನು ಇದು ಖಚಿತಪಡಿಸುತ್ತದೆ. ಟೆಸ್ಟ್‌ನಲ್ಲಿ ಮೂರು ರೀತಿಯ (ಐಜಿಎಂ, ಐಜಿಜಿ ಮತ್ತು ನೆಗೆಟಿವ್) ಫಲಿತಾಂಶ ಬರಬಹುದು. ಐಜಿಎಂ ಎಂದರೆ ದೇಹದಲ್ಲಿ ಇನ್ನೂ ವೈರಸ್ ಇದ್ದು, ಪ್ರತಿಕಾಯಗಳು ಸೃಷ್ಟಿಯಾಗುತ್ತಿವೆ ಎಂದು ಅರ್ಥ. ಐಜಿಜಿ ಎಂದರೆ ಪ್ರತಿಕಾಯ ಸೃಷ್ಟಿಯಾಗಿದ್ದು, ಮತ್ತೆ ವೈರಸ್ ಪ್ರಬಲವಾಗುವ ಸಾಧ್ಯತೆ ಕಡಿಮೆ. ನೆಗೆಟಿವ್ ಬಂದರೆ ದೇಹಕ್ಕೆ ಇನ್ನೂ ಸೋಂಕು ತಗಲಿಲ್ಲ ಎಂದು ಅರ್ಥ.

ದೇಹದಲ್ಲಿ ಸತ್ತ ವೈರಸ್ 3 ತಿಂಗಳು ಇರುತ್ತದೆ !

ದ.ಕ.ಜಿಲ್ಲೆಯಲ್ಲಿ ಕೋವಿಡ್ ಮರುಕಳಿಸಿದ ಕೆಲವು ದೂರುಗಳು ಬರತೊಡಗಿವೆ. ಕೋವಿಡ್ ಗುಣವಾದ ಬಳಿಕವೂ ಕೆಲವರಲ್ಲಿ ಮತ್ತೆ ಕೋವಿಡ್ ಪಾಸಿಟಿವ್ ಆಗಿದೆ ಎಂಬ ಮಾಹಿತಿ ಇದೆ. ಆದರೆ ಈ ಬಗ್ಗೆ ಜಿಲ್ಲಾಡಳಿತಕ್ಕೆ ಖಚಿತ ಮಾಹಿತಿ ಇಲ್ಲ. ಆದರೆ ಕೋವಿಡ್ ವೈರಸ್ ಮಾನವನ ದೇಹದಲ್ಲಿ ಸತ್ತರೂ, ಮೂರು ತಿಂಗಳು ಉಳಿಯುತ್ತದೆ ಎನ್ನುವುದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಅವರ ವಿವರಣೆ.

ಉಡುಪಿಯಲ್ಲಿ ಮರುಕಳಿಸಿಲ್ಲ

ಒಂದು ಪ್ರದೇಶದಲ್ಲಿ ಎಷ್ಟು ಜನರಿಗೆ ಕೋವಿಡ್ ಬಂದಿರಬಹುದು ಅಥವಾ ಎಷ್ಟು ಮಂದಿಯಲ್ಲಿ ಪ್ರತಿಕಾಯ ಶಕ್ತಿ ಇದೆ ಎಂಬುದನ್ನು ಅಂದಾಜಿಸಲು ಆ್ಯಂಟಿಬಾಡಿ ಟೆಸ್ಟ್ ಸಮೀಕ್ಷೆ ನಡೆಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಿಎಚ್‌ಒ ಡಾ.ಸುಧೀರಚಂದ್ರ ಸೂಡ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಬಂದವರು ಗುಣವಾಗಿ ಮತ್ತೊಮ್ಮೆ ಸೋಂಕು ತಗುಲಿದ ಉದಾಹರಣೆ ಇಲ್ಲ. ಆದರೆ 1 ತಿಂಗಳಾದರೂ ಗುಣವಾಗದ ರೋಗಿಗಳಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಯಾರಿಗಾದರೂ ಕೋವಿಡ್ ಮರುಕಳಿಸಿದ ಅನುಮಾನಗಳಿದ್ದರೆ, ಬಂದು ಆ್ಯಂಟಿಬಾಡಿ ಟೆಸ್ಟ್ ಮಾಡಿಸಬಹುದು. ಕೆಲವೊಮ್ಮೆ ದೇಹದಲ್ಲಿ ಸತ್ತ ವೈರಸ್‌ಗಳಿಂದಾಗಿ ಪಿಸಿಆರ್ ಟೆಸ್ಟ್ ಪಾಸಿಟಿವ್ ಬರುತ್ತದೆ, ಆದರೆ ಅವರಿಂದ ಸೋಂಕು ಹರಡುವುದಿಲ್ಲ. ಹಾಗಾಗಿ ಹೆದರಿಕೆ ಬೇಡ.

- ಡಾ.ರಾಮಚಂದ್ರ ಬಾಯರಿ, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net