

ಗಂಗಾವತಿ: ರಾಜ್ಯ ಸರ್ಕಾರವು ಅಹಿಂದ ವಿದ್ಯಾರ್ಥಿಗಳ ಪ್ರೋತ್ಸಾಹ-ವಿದ್ಯಾರ್ಥಿ ವೇತನ ಅನುದಾನ ಕಡಿತಗೊಳಿಸಿದೆ ಎಂದು ಆರೋಪಿಸಿ ಎಸ್‌ಎ್ಐನಿಂದ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ವಿವಿಧ ಶಾಲೆ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಮಿತಿ ಸದಸ್ಯರು ಮಾನವ ಸರಪಳಿ ನಿರ್ಮಿಸಿ ಸಂಚಾರ ತಡೆ ನಡೆಸಿದರು. ತಾಲೂಕಾಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ಅಹಿಂದ ಸಮುದಾಯದ ವಿದ್ಯಾರ್ಥಿ ವೇತನ ಹಾಗೂ ಪ್ರೋತ್ಸಾಹ ಧನ ಯೋಜನೆಯಡಿ ರಾಜ್ಯ ಸರ್ಕಾರ ಕತ್ತರಿ ಪ್ರಯೋಗ ಮಾಡಿದೆ. ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುವ ಎಸ್‌ಸಿ-ಎಸ್ಟಿ ವಿದ್ಯಾರ್ಥಿಗಳ ಏಳು ಸಾವಿರ ರೂ. ಪ್ರೋತ್ಸಾಹ ಧನ ಕಡಿತಗೊಳಿಸಲಾಗಿದೆ ಎಂದರು.
ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಮರುಪಾವತಿ ವಿಷಯಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ. ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಮಾತ್ರ ಶುಲ್ಕ ಮರುಪಾವತಿಗೆ ಅರ್ಹತೆ ಹೊಂದಿದ್ದಾರೆ ಎಂದಿರುವುದು ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ.
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಪಿಎಚ್.ಡಿ ಮಾಡುವ ಅಲ್ಪಸಂಖ್ಯಾತರ ಪ್ರೋತ್ಸಾಹಧನ 25 ಸಾವಿರ ರೂ.ಗಳಿಂದ 10 ಸಾವಿರ ರೂ.ಗೆ ಕಡಿತಗೊಳಿಸಲಾಗಿದೆ. ಮೊದಲಿನಂತೆ ಪ್ರೋತ್ಸಾಹಧನ ಮತ್ತು ವಿದ್ಯಾರ್ಥಿ ವೇತನ ವಿತರಿಸಬೇಕು. ವಿದ್ಯಾರ್ಥಿ ವಿರೋಧಿ ನೀತಿ ಕೈಬಿಡುವಂತೆ ಒತ್ತಾಯಿಸಿದರು.
ರಾಜ್ಯ ಸಮಿತಿ ಅಧ್ಯಕ್ಷ ಅಮರೇಶ ಕಡಗದ್, ಪದಾಧಿಕಾರಿಗಳಾದ ಯು.ನಾಗರಾಜ್, ಬಾಲಾಜಿ, ಶರ್ೀ, ಬಸಯ್ಯ, ಶಂಕರ, ನಿರ್ಮಲಾ, ನಿಖಿತಾ, ಶ್ವೇತಾ, ತೇಜಸ್ವಿನಿ, ಸವಿತಾ, ವೈಷ್ಣವಿ, ರೇಖಾ, ಮಹೆಬೂಬಿ ಇತರರಿದ್ದರು.