ಮಾದಕ ವ್ಯಸನಿಗಳಾಗುತ್ತಿರುವ ವಿದ್ಯಾರ್ಥಿಗಳು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಆತಂಕ

Anti-Smuggling Day Mandya
Published on

ಮಂಡ್ಯ: ಮಾದಕ ವಸ್ತುಗಳ ಸೇವನೆಗೆ ಹೆಚ್ಚಾಗಿ ವಿದ್ಯಾರ್ಥಿಗಳೇ ದಾಸರಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಮಾಡಿಕೊಳ್ಳುವ ಸ್ನೇಹಿತ ವರ್ಗ ಅಥವಾ ಜೀವನದಲ್ಲಿ ಗುರಿ ಸಾಧಿಸಲು ಶ್ರಮಿಸದೇ ಇರುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅಭಿಪ್ರಾಯಪಟ್ಟರು.
ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಮುಂದಿನ ಶಕ್ತಿಯಾಗಬೇಕಿರುವ ಯುವ ಜನತೆ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.
ಜಿಲ್ಲಾ ಅಬಕಾರಿ ಉಪ ಆಯುಕ್ತ ರವಿಶಂಕರ್ ಮಾತನಾಡಿದರು. ಅಪರ ಪೊಲೀಸ್ ವರಿಷ್ಠಾಧಿಕಾರಿ-1 ಸಿ.ಇ.ತಿಮ್ಮಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಇ.ಗಂಗಾಧರಸ್ವಾಮಿ, ಮಂಡ್ಯ ವಿಭಾಗದ ಡಿವೈಎಸ್ಪಿ ಎಲ್.ಕೆ.ರಮೇಶ್ ಇತರರಿದ್ದರು.

ನಗರದಲ್ಲಿ ಜಾಗೃತಿ ಜಾಥಾ
ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಣಿಕೆ ವಿರುದ್ಧ ಪೊಲೀಸ್ ಇಲಾಖೆ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥ ನಡೆಯಿತು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಿಲ್ಲಾ ಎಸ್ಪಿ ಎನ್.ಯತೀಶ್ ಜಾಥಕ್ಕೆ ಚಾಲನೆ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮಾದಕ ದ್ರವ್ಯಗಳ ಕಳ್ಳ ಸಾಗಣೆ ಸಮಾಜದಲ್ಲಿ ದೊಡ್ಡ ಪಿಡುಗಾಗಿದೆ. ಇವುಗಳ ದೀರ್ಘಾವಧಿ ಬಳಕೆ ಕಳಪೆ ಆರೋಗ್ಯ, ಮಾನಸಿಕ ಅಸ್ವಸ್ಥತೆ, ಸಾವಿಗೆ ಕಾರಣವಾಗುತ್ತದೆ. ಇದು ಕೇವಲ ಸೇವನೆ ಮಾಡುವವರ ಮೇಲೆ ಮಾತ್ರವಲ್ಲದೇ ಸಮಾಜನ ಮೇಲೆ ಕೂಡ ಭಾರೀ ಪರಿಣಾಮ ಹೊಂದಿದೆ. ಇದು ಸಾಮಾಜಿಕವಾಗಿ, ದೈಹಿಕವಾಗಿ, ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಹಾಳುಮಾಡುತ್ತದೆ. ಮಾದಕ ವಸ್ತುಗಳ ಆಕ್ರಮ ಉತ್ಪಾದನೆ, ಸಾಗಾಣಿಕೆ, ಮಾರಾಟ ಅಪರಾಧ. ಈ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಸಾರ್ವಜನಿಕರು ಕೂಡಲೇ ಸೈಬರ್, ಆರ್ಥಿಕ ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ನಿಮ್ಮ ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿಡಲಾಗುತ್ತದೆ ಎಂದು ಅರಿವು ಮೂಡಿಸಲಾಯಿತು. ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net