ಸೋಮವಾರಪೇಟೆ: ಬಿಟ್ಟಿ ಭಾಗ್ಯಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದ್ದು, ಆರ್ಥಿಕವಾಗಿ ದಿವಾಳಿಯಾಗಿರುವುದರಿಂದ ಜನರ ಮೇಲೆ ತೆರಿಗೆ ಬರೆ ಹಾಕಲಾಗುತ್ತಿದೆ ಎಂದು ಸೋಮವಾರಪೇಟೆ ಮಂಡಲ ಬಿಜೆಪಿ ವಕ್ತಾರ ಕಂಠಿ ಕಾರ್ಯಪ್ಪ ಆರೋಪಿದ್ದಾರೆ.
ಗ್ಯಾರಂಟಿ ಹೆಸರಿನ ಬಿಟ್ಟಿ ಭಾಗ್ಯಗಳಿಗೆ ಜನರ ತೆರಿಗೆ ಹಣವನ್ನು ವಿನಿಯೋಗಿಸಬಾರದು. ಕಾಂಗ್ರೆಸ್‌ನವರು ತಮ್ಮ ಜೇಬಿನಿಂದ ಕೊಟ್ಟರೆ ನಮ್ಮ ತಕರಾರು ಇಲ್ಲ. ದುಪ್ಪಟ್ಟು ತೆರಿಗೆಯಿಂದ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ದಿನನಿತ್ಯ ಬಳಸುವ ವಸ್ತುಗಳ ಬೆಲೆ ದುಬಾರಿಯಾಗುತ್ತಿದೆ. ಹೆಚ್ಚಿಸಿರುವ ಪೆಟ್ರೋಲ್, ಡೀಸೆಲ್, ಹಾಲಿನ ದರವನ್ನು ಇಳಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಬೆಲೆ ಏರಿಕೆಯನ್ನು ವಿರೋಧಿಸಿ ವಿರಾಜಪೇಟೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿ ದಹನ ಮಾಡಲಾಗಿದೆ. ಇದನ್ನು ವೈಯಕ್ತಿತವಾಗಿ ತೆಗೆದುಕೊಳ್ಳಬಾರದು. ಈ ವಿಷಯದಲ್ಲಿ ಜಾತಿ ತಂದು ಕೆಲವರು ಪ್ರಚೋದನೆ ಮಾಡುತ್ತಿರುವುದು ಖಂಡನೀಯ. ಪ್ರತಿಭಟನೆ ಎಂಬುದು ಸಂವಿಧಾನಾತ್ಮಕ ಹಕ್ಕು ಎಂದು ಹೇಳಿದರು.
ಮಂಡಲ ಅಧ್ಯಕ್ಷ ಎಂ.ಎಲ್.ಗೌತಮ್ ಮಾತನಾಡಿ, ಪ್ರತಿಭಟನೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಆದರೂ 29 ಕಾರ್ಯಕರ್ತರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಕೂಡಲೇ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಪೊಲೀಸರು ಕೇಸುಗಳನ್ನು ಹಾಕುವ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮೋಕ್ಷಿತ್ ರಾಜು, ದರ್ಶನ್ ಜೋಯಪ್ಪ, ಎಸ್.ಆರ್.ಸೋಮೇಶ್ ಇದ್ದರು.