

ಆನೇಕಲ್: ರೈತರ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರದ ಅಮಲಿನಲ್ಲಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ಮುಂದಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಜಾಗೃತಿ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಅತ್ತಿಬೆಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಅಧಿಕಾರ ಸ್ವೀಕಾರ ಮಾಡುವಾಗ ರೈತರ ಪರ ಕೆಲಸ ಮಾಡುತ್ತೇನೆ ಎಂದಿದ್ದ ಸಿಎಂ, ರೈತರ ವಿರೋಧಿ ಕಾಯ್ದೆ ಜಾರಿಗೆ ತರಲು ಹೊರಟ್ಟಿದ್ದಾರೆಂದು ಆರೋಪಿಸಿದರು.
ಕರ್ನಾಟಕದಲ್ಲಿ ಕರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೂ ಸರ್ಕಾರ ನಿದ್ದೆಯಿಂದ ಎದ್ದಿಲ್ಲ ಎಂದರು. ಸೆ.28ರಂದು ನಡೆಯುವ ಹೋರಾಟಕ್ಕೆ ಬೆಂಬಲ ನೀಡಲಿದ್ದು, ಇದರಿಂದ ರೈತರ ಬದುಕು ಹಸನಾಗಲಿದೆ ಎಂದರು.
ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಮಾತನಾಡಿ, ರೈತ ವಿರೋಧಿ ಮಸೂದೆ ಜಾರಿಗೆ ತರುವ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಭಿನ್ನಾಭಿಪ್ರಾಯ ಇದ್ದರೂ ಎಲ್ಲ ರೈತ ಸಂಘಟನೆಗಳು ಕನ್ನಡಪರ ಸಂಘಟನೆಗಳು ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್ ದೇವ ಮಾತನಾಡಿ, ರಾಜ್ಯ ಸರ್ಕಾರ ಈ ಮಸೂದೆ ಹಿಂಪಡೆಯದಿದ್ದರೆ ರಾಜ್ಯದ ಗಡಿ ಬಂದ್ ಮಾಡಿ ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಅತ್ತಿಬೆಲೆ ವೃತ್ತದಿಂದ ರಾಜ್ಯದ ಗಡಿ ಗೋಪುರದ ವರೆಗೆ ನೂರಾರು ಜನ ಹೋರಾಟಗಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಕೈಗೊಂಡರು. ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದ ಹೋರಾಟಗಾರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.
ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ್ಣದ ಉಪಾಧ್ಯಕ್ಷ ಲೋಕೇಶ್ ಗೌಡ, ಕನ್ನಡ ಪರ ಹೋರಾಟಗಾರರಾದ ಮುಬಾರಕ್, ಸತೀಶ್, ಕನ್ನಡ ಕೃಷ್ಣ, ಕನ್ನಡ ಜಾಗೃತಿ ವೇದಿಕೆ ರಾಜ್ಯ ಯುವ ಘಟಕ ಅಧ್ಯಕ್ಷ ಗೌರೀಶ್, ಕಜಾವೇ ಜಿಲ್ಲಾಧ್ಯಕ್ಷ ಕೆ. ನಾಗರಾಜು ಮತ್ತಿತರರು ಹಾಜರಿದ್ದರು.