

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ಲೇಔಟ್‌ನ ಯಶೋಧಾ ರಾಜಣ್ಣ ಅವರನ್ನು ಜೆಡಿಎಸ್ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ ಗೌಡ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಯಶೋಧಾ ರಾಜಣ್ಣ ಅವರು ಹಲವು ದಿನಗಳಿಂದ ನಿರಂತರವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿಕೊಂಡು ಬಂದಿದ್ದರು. ಈ ಬಗ್ಗೆ ಹಲವಾರು ಬಾರಿ ಅವರಿಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೂ ಅವರು ಪಕ್ಷದ ಆದೇಶವನ್ನು ಧಿಕ್ಕರಿಸಿ ಪಕ್ಷ ವಿರೋಧಿ ಕೃತ್ಯಗಳನ್ನು ಮುಂದುವರಿಸಿದ್ದರು ಎಂದು ತಿಳಿಸಿದ್ದಾರೆ.
ಅಲ್ಲದೆ, ಮಹಾಲಕ್ಷ್ಮಿ ಲೇಔಟ್‌ನ ಜೆಡಿಎಸ್ ಮುಖಂಡರು ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಯಶೋಧಾ ರಾಜಣ್ಣ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ರಮೇಶ ಗೌಡ ತಿಳಿಸಿದ್ದಾರೆ.