ಪಕ್ಷ ವಿರೋಧಿ ಚಟುವಟಿಕೆ- ಮೂವರ ಉಚ್ಚಾಟನೆಗೆ ಮನವಿ

Yavagal
Published on

ನರಗುಂದ: ಕೆಪಿಸಿಸಿ ಸ್ವಯಂ ಘೋಷಿತ ವೈದ್ಯಕೀಯ ಘಟಕದ ಅಧ್ಯಕ್ಷ ಡಾ. ಸಂಗಮೇಶ ಕೊಳ್ಳಿಯವರ, ಜಿಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ ಹಾಗೂ ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಶರಥ ಗಾಣಿಗೇರ ಅವರು ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಶಾಮೀಲಾಗಿದ್ದರಿಂದ ಬಿ.ಆರ್. ಯಾವಗಲ್ಲ ಅವರಿಗೆ ಸೋಲಾಗಿದೆ. ಈ ಮೂವರನ್ನು ಉಚ್ಚಾಟನೆ ಮಾಡುವಂತೆ ಪಕ್ಷದ ಮುಖಂಡರಿಗೆ ಮನವಿ ಮಾಡಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್ಲ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿನ ಕೆಲವೊಂದು ಆಂತರಿಕ ಭಿನ್ನಮತ ಶಮನಗೊಳಿಸಲು ಯಾರೂ ಮುಂದಾಗುತ್ತಿಲ್ಲ. ಹೀಗಾಗಿ ಮತಕ್ಷೇತ್ರದಲ್ಲಿ ಎ-ಬಿ ಟೀಂ ಸೃಷ್ಟಿಯಾಗಿವೆ ಎಂದರು.

ಮೂವರಲ್ಲಿಯೂ ಕುಟುಂಬ ರಾಜಕಾರಣವಿದೆ. ಈ ಬಗ್ಗೆ ನಮ್ಮಲ್ಲಿ ಸಾಕ್ಷಿಗಳಿವೆ. ವಿನಾಕಾರಣ ಬಿ.ಆರ್.ಯಾವಗಲ್ಲರ ತೇಜೋವಧೆ ಮಾಡಿದರೆ ಸುಮ್ಮನಿರುವುದಿಲ್ಲ. ಇದು ಹೀಗೆ ಮುಂದುವರಿದರೆ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರೇ ಹೊರಹಾಕುತ್ತಾರೆ ಎಂದು ಎಚ್ಚರಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾವುದೇ ಲಿಖಿತ, ಮೌಖಿಕ ಆದೇಶವಿಲ್ಲದಿದ್ದರೂ ಕಾರ್ಯಕರ್ತರಲ್ಲಿ ವಿನಾಕಾರಣ ಗೊಂದಲ ಮೂಡಿಸುವ ಕೆಲಸ ಮಾಡಲಾಯಿತು. ಇದು ಯಾವಗಲ್ ಅವರ ಸೋಲಿಗೆ ಕಾರಣವಾಯಿತು. ಇವರ ಸೋಲಿಗೆ ನೈತಿಕ ಹೊಣೆ ಹೊತ್ತು ಎರಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ ಕೇಳುವ ನೈತಿಕ ಹಕ್ಕು ಕೊಳ್ಳಿ ಅವರಿಗೆ ಇಲ್ಲ. ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಗದಗ ಮತಕ್ಷೇತ್ರದ ಬಿಜೆಪಿ ಟಿಕೆಟ್ ಕೇಳಲು ಮಾಜಿ ಸಚಿವ ಸಿ.ಸಿ. ಪಾಟೀಲರ ಬಳಿ ಹೋಗಿದ್ದರು ಎಂದು ಆರೋಪಿಸಿದರು.

ರಾಜು ಕಲಾಲ, ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಣ್ಣ ಕೊಳ್ಳೇರಿ, ಅಪ್ಪಣಗೌಡ ನಾಯ್ಕರ, ಗುರುಪಾದಪ್ಪ ಕುರಹಟ್ಟಿ, ಟಿ.ಬಿ. ಶಿರಿಯಪ್ಪಗೌಡ್ರ, ಫಕ್ರುಸಾಬ ಚಿಕ್ಕಮಣ್ಣೂರ, ಶಿವನಗೌಡ ಹೆಬ್ಬಳ್ಳಿ, ದೇವರಾಜ ನಾಗನೂರ, ಎಂ.ಬಿ. ಅರಹುಣಸಿ, ಪ್ರಕಾಶ ಹಡಗಲಿ, ಮಲ್ಲಪ್ಪ ಅಬ್ಬಿಗೇರಿ, ಬಿ.ಐ. ಕಡಕೋಳ, ಎಫ್.ವೈ. ದೊಡಮನಿ, ದ್ಯಾಮಣ್ಣ ಸವದತ್ತಿ, ವಿಷ್ಣು ಸಾಠೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net