ಮಂಡ್ಯವನ್ನು ನಿರ್ಲಕ್ಷ್ಯ ಮಾಡಿದ ಸಿಎಂ ಸಿದ್ದರಾಮಯ್ಯ: ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಟೀಕೆ

1 (2)
Published on

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಮಂಡ್ಯ ಬಗ್ಗೆ ಮಲತಾಯಿ ಧೋರಣೆ ಪ್ರದರ್ಶಿಸಿದ್ದಾರೆ. ಅತಿ ಹೆಚ್ಚು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿದ ಜಿಲ್ಲೆಗೆ ಯಾವ ಕೊಡುಗೆಯನ್ನೂ ನೀಡದಿರುವುದು ವಿಪರ್ಯಾಸ. ಮಾತ್ರವಲ್ಲದೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು ಸೇರಿದಂತೆ ಬಹುಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ವೈಜ್ಞಾನಿಕತೆ ಮತ್ತು ದೂರದೃಷ್ಟಿತ್ವ ಯಾವುದೂ ಈ ಬಜೆಟ್‌ನಲ್ಲಿಲ್ಲ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಟೀಕಿಸಿದರು.

ಎಸ್ಸಿ ಮತ್ತು ಎಸ್ಟಿ ಉಪ ಯೋಜನೆ ಕಾಯ್ದೆಯನ್ವಯ ಪ್ರಸಕ್ತ ಬಜೆಟ್‌ನಲ್ಲಿ 40 ಸಾವಿರ ಕೋಟಿ ರೂಗೂ ಹೆಚ್ಚು ಅನುದಾನವನ್ನು ಮೀಸಲಿಡಬೇಕಾಗಿತ್ತು. ಆದರೆ, ಸಿದ್ದರಾಮಯ್ಯ ಅವರು ಕೇವಲ 34 ಸಾವಿರ ಕೋಟಿ ರೂ ಕೊಟ್ಟಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ಜನಗಣತಿಯನ್ನು ಬಿಡುಗಡೆ ಮಾಡದೆ 2011ರ ಜನಗಣತಿಯನ್ವಯ ಹಳೆಯ ಅಂಕಿಅಂಶಗಳನ್ನಿಟ್ಟುಕೊಂಡು ಬಜೆಟ್ ರೂಪಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ದಲಿತರ ಅಭಿವೃದ್ಧಿ ವಿಚಾರವಾಗಿ ಸಿದ್ದರಾಮಯ್ಯನವರು ಮಾಡಿದ ಒಂದು ತಪ್ಪಿನಿಂದಾಗಿ 10 ವರ್ಷಗಳ ಬಜೆಟ್‌ನಲ್ಲಿ ಲಕ್ಷಾಂತರ ಕೋಟಿ ರೂ ಖೋತಾ ಆಗಿದೆ. ಈ ಎಲ್ಲವನ್ನೂ ಸಮಗ್ರವಾಗಿ ಲೆಕ್ಕ ಹಾಕಿ ಖೋತಾ ಆದ ಅನುದಾನವನ್ನು ಕ್ರೋಢೀಕರಿಸಿ ರಾಜ್ಯದ ಎಲ್ಲ ಕುಟುಂಬಗಳಿಗೆ ತಲಾ 25 ಲಕ್ಷ ರೂ ಅನುದಾನ ನೇರ ಪಾವತಿ ಮಾಡಿ ಸ್ವಯಂ ಉದ್ಯೋಗಕ್ಕೆ ನೆರವಾಗುವ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಪರಿಶಿಷ್ಟರಿಗೆ ವಾಹನ ಸಾಲದಲ್ಲಿ ಶೇ.75ರಷ್ಟು ಸಬ್ಸಿಡಿ ಮಾತ್ರ ಘೋಷಿಸಿ ಸ್ವಯಂ ಉದ್ಯೋಗ ಸೌಲಭ್ಯಗಳ ಸಾಲದಲ್ಲಿ ಗರಿಷ್ಠ 1 ಲಕ್ಷ ರೂ ಮೀತಿಗೊಳಿಸಿ ದ್ವಂದ್ವ ಪ್ರದರ್ಶಿಸಿದ್ದಾರೆ ಎಂದರು.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿವೆ. ಆದ್ದರಿಂದ ಮಂಡ್ಯ ನಗರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಟ್ರಾಮಾಕೇರ್ ಸೆಂಟರ್ ಸ್ಥಾಪನೆಯಾಗಬಹುದೆಂದು ಜನರು ನಿರೀಕ್ಷಿಸಿದ್ದರು. ಅದು ಹುಸಿಯಾಗಿದ್ದು, ತವರು ಜಿಲ್ಲೆ ಮೈಸೂರಿಗೆ ಟ್ರಾಮಾಕೇರ್ ಸೆಂಟರ್ ಮಂಜೂರು ಮಾಡಿದ್ದಾರೆ. ಮೈಷುಗರ್‌ಗೆ ಈಗಾಗಲೇ 50 ಕೋಟಿ ರೂ ನೀಡಿರುವುದನ್ನೇ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಹೊಸದಾಗಿ ಅನುದಾನ ನೀಡಿಲ್ಲ. ಇದು ಜಿಲ್ಲೆಗೆ ಮಾಡಿದ ಅನ್ಯಾಯ ಎಂದು ಆಕ್ರೋಶದಿಂದ ನುಡಿದರು.

ದಸಂಸ ಮುಖಂಡರಾದ ಕೆ.ಎಂ.ಅನಿಲ್‌ಕುಮಾರ್, ಕೆ.ಎಂ.ಶ್ರೀನಿವಾಸ್, ಹರಿಕುಮಾರ್, ಸೋಮಶೇಖರ್, ಬಿ.ಆನಂದ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net