

ಮಂಡ್ಯ: ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಬಂದಿದೆ. ಆದಾಗ್ಯೂ ಹೊರ ರಾಜ್ಯದಿಂದ ಬರುವ ಕಾರ್ಮಿಕರನ್ನು ಸ್ಕ್ರೀನಿಂಗ್ ಟೆಸ್ಟ್ ಮಾಡುವ ಮೂಲಕ ಮಲೇರಿಯಾ ರೋಗ ಬಾರದಂತೆ ಎಚ್ಚರ ವಹಿಸಲು ಎಲ್ಲರೂ ಸಹಕರಿಸಬೇಕು ಎಂದು ವೈದ್ಯ ಡಾ.ಕಾಂತಾರಾಜು ಮನವಿ ಮಾಡಿದರು.
ನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ವತಿಯಿಂದ ಮಲೇರಿಯಾ ವಿರೋಧ ಮಾಸಾಚರಣೆ ಅಂಗವಾಗಿ ಖಾಸಗಿ ವೈದ್ಯರು ಮತ್ತು ಪ್ರಯೋಗಶಾಲಾ ತಂತ್ರಜ್ಞರಿಗಾಗಿ ಆಯೋಜಿಸಿದ್ದ ಅಡ್ವೋಕೇಸಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಲೇರಿಯಾ ರೋಗದ ವಿಷಯವಾಗಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದರಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಆಂದೋಲನದ ಮೂಲಕ ಜಾಗೃತಿ ಮಾಡಿಸಲಾಗುತ್ತಿದೆ. ಸ್ಥಳೀಯವಾಗಿ ನೋಡಿದರೆ ಮಲೇರಿಯಾ ರೋಗದ ಬಗ್ಗೆ ಮಾಹಿತಿಯು ಸಧ್ಯಕ್ಕೆ ಇರುವುದಿಲ್ಲ. ಆದರೂ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಸಹಾಯಕ ಕೀಟ ಶಾಸ್ತ್ರಜ್ಞೆ ಜಾನೇಟ್ ಮಾತನಾಡಿ, ಸೊಳ್ಳೆಗಳು ಯೆಥೇಚ್ಚವಾಗಿ ಕಾಣುವ ಕಡೆ ನಾವು ಜಾಗೃತಿ ಮೂಡಿಸುತ್ತಿದ್ದೇವೆ. ಹೊರ ರಾಜ್ಯಗಳಿಂದ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರ ರಕ್ತ ಪರೀಕ್ಷೆ ಮಾಡಿ ನೋಡಿದಾಗ ಅವರಲ್ಲಿ ಮಲೇರಿಯಾ ಇರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ಡಾ.ಚಂದ್ರಶೇಖರ್, ಡಾ.ಮಂಜುನಾಥ್, ಡಾ.ಜಗದೀಶ್, ಡಾ.ಕಕ್ಕಿಲಾಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೋಮಶೇಖರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಗಳಾ ಇತರರಿದ್ದರು.