

ರಾಯಚೂರು: ಕೇಂದ್ರ ಬಜೆಟ್‌ನಲ್ಲಿರುವ ಕಾರ್ಮಿಕ ವಿರೋಧಿ ನೀತಿ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿ ನೀತಿ ಕೈಬಿಡುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಎಐಯುಟಿಯುಸಿ ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಬಂಧು ಸಂಘಟನೆಗಳಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿ, ಸರ್ಕಾರ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಕೈಬಿಡಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದರು.
ನಿರುದ್ಯೋಗ ಸಮಸ್ಯೆ, ಗುತ್ತಿಗೆ ಪದ್ಧತಿಯಿಂದಾಗಿ ಕಾರ್ಮಿಕರು ಸಂಕಷ್ಟದಲ್ಲಿದ್ದರೂ ಬಜೆಟ್‌ನಲ್ಲಿ ಇದಕ್ಕೆ ಪರಿಹಾರ ಸೂಚಿಸುವ ಬದಲು ಕಾರ್ಪೋರೇಟ್ ಸಂಸ್ಥೆಗಳಿಗೆ ರಿಯಾಯಿತಿ ನೀಡುವ ಕೆಲಸ ಮಾಡಲಾಗಿದೆ. ಆಶಾ, ಅಂಗನವಾಡಿ, ಬಿಸಿಯೂಟ ಸೇರಿ ವಿವಿಧ ಕಾರ್ಮಿಕರಿಗೆ ಸಮರ್ಪಕ ಗೌರವಧನ ನೀಡಲಾಗುತ್ತಿಲ್ಲ. ಮತ್ತೊಂದೆಡೆ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವ ನಿಟ್ಟಿನಲ್ಲಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವ ಕಾರ್ಯ ನಡೆಸಲಾಗುತ್ತಿದೆ. ದುಡಿಯುವ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಸರ್ಕಾರಗಳು ಮಾಡುತ್ತಿಲ್ಲ.
ಕಟ್ಟಡ ಸೇರಿ ಇತರೆ ಕಾರ್ಮಿಕರಿಗೆ ಸಮರ್ಪಕ ಗೌರವಧನ ನಿಗದಿಪಡಿಸಬೇಕು. ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕ ಕಾಯ್ದೆ ತಿದ್ದುಪಡಿ ಕೈಬಿಡಬೇಕು ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಎಐಯುಟಿಯುಸಿಯ ಜಿಲ್ಲಾಧ್ಯಕ್ಷ ಎನ್.ಎಸ್.ವೀರೇಶ, ಪದಾಧಿಕಾರಿಗಳಾದ ಸಿ.ಮಹೇಶ, ತಿರುಮಲರಾವ್, ಶಿವರಾಜ, ಈರಮ್ಮ, ಪ್ರಭಾವತಿ, ಸಾಜಿದಾ, ಯಲ್ಲಪ್ಪ, ವೆಂಕಯ್ಯ, ಬಸವರಾಜ, ಮಲ್ಲೇಶ, ಗಾಯತ್ರಿ, ನಾಗರತ್ನ, ನರಸಿಂಹಲು, ಇಸ್ಮಾಯಿಲ್, ಲಕ್ಷ್ಮಣ, ರವಿ, ರಮೇಶ ಪಾಲ್ಗೊಂಡಿದ್ದರು.