ಮಾನವ ಸಾಗಾಣೆ ಕಂಡುಬಂದರೆ ಮಾಹಿತಿ ಕೊಡಿ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಭೃಂಗೇಶ್ ಹೇಳಿಕೆ

Anti-Human Trafficking Day Mandya
Published on

ಮಂಡ್ಯ: ಮಕ್ಕಳಿಂದ ಭಿಕ್ಷಾಟನೆ ಮಾಡಿಸುವುದು ಹಾಗೂ ಮಾನವ ಕಳ್ಳಸಾಗಣೆ ಮಾಡಿ ಅಂಗಾಂಗ ಕಸಿದುಕೊಳ್ಳುವುದು ಅಪರಾಧ. ಇಂತಹ ಘಟನೆ ಕಂಡುಬಂದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಭೃಂಗೇಶ್ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪಿಇಎಸ್ ಕಾನೂನು ಕಾಲೇಜು ಮತ್ತು ಕಾನೂನು ಸೇವಾ ಘಟಕ, ವಕೀಲರ ಸಂಘದಿಂದ ಆಯೋಜಿಸಿದ್ದ ಮಾನವ ಕಳ್ಳಸಾಗಾಣಿ ವಿರೋಧಿ ದಿನದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಿಗೆ ಸಹಾನುಭೂತಿ ಇರಬೇಕು. ಆದರೆ ಅದು ನಮ್ಮನ್ನು ನಾಶ ಮಾಡುವ ರೀತಿಯಲ್ಲಿ ಅಲ್ಲ. ಸಮಾಜದಲ್ಲಿ ಒಳ್ಳೆಯದನ್ನ ನೋಡಬೇಕು. ನಮಗೆ ಅರಿವಿಲ್ಲದೇ ಸಣ್ಣ ತಪ್ಪುಗಳನ್ನು ಮಾಡುತ್ತೇವೆ, ಅದನ್ನು ತಿಳಿದ ಮೇಲೆ ತಿದ್ದಿಕೊಳ್ಳಬೇಕು. ಅದನ್ನು ಹಾಗೆಯೇ ಬಿಟ್ಟರೆ ದೊಡ್ಡ ಎಸಗಲು ಕಾರಣವಾಗುತ್ತದೆ. ಇದಕ್ಕೆ ಕಾನೂನು ಅರಿವು ಮುಖ್ಯವಾಗಿದೆ ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಮಾತನಾಡಿ, ಅನ್ಯಾಯ ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ಅದನ್ನು ಯಾರು ಹೇಳಿದರೂ ಎನ್ನುವ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ. ಇಂತಹ ಸಂದರ್ಭಗಳನ್ನು ಬಳಿಸಿಕೊಂಡು ಸಮಾಜದಲ್ಲಿ ನಡೆಯುವ ಅಪರಾಧ ಚಟುವಟಿಕೆ ತಡೆಗಟ್ಟಲು ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಿ ಎಂದು ತಿಳಿಸಿದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೊಕೇಶ್ ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ, ಸಹಾಯಕ ಪ್ರಾಧ್ಯಾಪಕ ಎಸ್.ಬಿ.ಬೋರೇಗೌಡ, ಸಹಾಯಕ ಆರಕ್ಷಕ ಉಪ ನಿರೀಕ್ಷಕ ರಮೇಶ್, ಕಾನೂನು ಸಹಾಯಕ ಪ್ರಾಧ್ಯಾಪಕ ಕೆ.ಎಸ್.ಜಯಕುಮಾರ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net