ಪಾಕಿಸ್ತಾನ, ಚೀನಾಗಿಂತ ದೇಶದ ಒಳಗಿರುವ ಹಿಂದು ವಿರೋಧಿಗಳು ಬಹಳ ಅಪಾಯಕಾರಿ: ಚಕ್ರವರ್ತಿ ಸೂಲಿಬೆಲೆ

28 smg 8
ಚಕ್ರವರ್ತಿ ಸೂಲಿಬೆಲೆ ಸೋಮವಾರ ಶಿವಮೊಗ್ಗದಲ್ಲಿ ಉಪನ್ಯಾಸ ನೀಡಿದರು.
Published on

ಶಿವಮೊಗ್ಗ: ಪಾಕಿಸ್ತಾನ, ಚೀನಾ ಮಾತ್ರ ನಮ್ಮ ಶತ್ರುಗಳಲ್ಲ. ದೇಶದ ಒಳಗಿರುವ ಹಿಂದು ಹಾಗೂ ಭಾರತ ವಿರೋಧಿ ಶಕ್ತಿಗಳು ಹೊರಗಿನ ಶತ್ರುಗಳಿಗಿಂತಲೂ ಅಪಾಯಕಾರಿ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಕರ್ನಾಟಕ ಸಂಘದಿಂದ ಅಜೇಯ ಸಂಸ್ಕೃತಿ ಬಳಗ ಹಾಗೂ ಯುವಾ ಬ್ರಿಗೇಡ್‌ನಿಂದ ಸೋಮವಾರ ಏರ್ಪಡಿಸಿದ್ದ ಇನ್ನೂ ಮಲಗಿದ್ದರೆ ಏಳುವಾಗ ಭಾರತವಿರುವುದಿಲ್ಲ ಎಂಬ ವಿಷಯದ ಕುರಿತು ಮಾತನಾಡಿದ ಅವರು, ದೇಶದ ಒಳಗಿರುವ ಶಕ್ತಿಗಳಿಗೆ ಹಿಂದುಗಳನ್ನು ಟೀಕಿಸುವುದೇ ಕೆಲಸ. ಇವರ ಕುತಂತ್ರದ ಬಗ್ಗೆ ಸದಾ ಎಚ್ಚರದಿಂದ ಇರಲೇಬೇಕು ಎಂದರು.
2020ರಲ್ಲೇ ಸೇನಾ ದಂಡನಾಯಕ ಬಿಪಿನ್ ರಾವತ್ ಇದನ್ನು ಎಚ್ಚರಿಸಿದ್ದರು. ದೇಶದ ಗಡಿಯಲ್ಲಿನ ಶತ್ರುವನ್ನು ಗುರುತಿಸುವುದು, ಹಿಮ್ಮೆಟ್ಟಿಸುವುದು ಸುಲಭ. ಆದರೆ ಒಳಗಿರುವ, ನಮ್ಮ ಸುತ್ತಲೂ ಇರುವ ವಂಚಕರನ್ನು ದೇಶದ್ರೋಹಿಗಳನ್ನು ಪತ್ತೆ ಮಾಡುವುದು ಸುಲಭವಲ್ಲ ಎಂದು ರಾವತ್ ಹೇಳಿದ್ದರು. ಈಗ ಅದರ ಪರಿಣಾಮ ನಮ್ಮನ್ನು ಕಾಡುತ್ತಿದೆ ಎಂದು ಹೇಳಿದರು.
ಭಾರತ ವಿಭಜನೆಯಾದ ಬಳಿಕ ಇಲ್ಲಿಯೇ ಉಳಿದ ಅನೇಕ ಮಂದಿಗೆ ಈ ರಾಷ್ಟ್ರ ನಮ್ಮದಲ್ಲ ಎಂಬ ಮನೋಭಾವ ಮೂಡಿತ್ತು. ಅವರಿಗೆ ನಾವು ಮನವರಿಕೆ ಮಾಡುವಲ್ಲಿ ವಿಫಲವಾಗಿದ್ದೇ ಇಂದಿನ ಸಮಸ್ಯೆಗೆ ಕಾರಣ. ನೀವು ಮೂಲತಃ ಭಾರತೀಯರೇ, ಹಿಂದುಗಳೇ ಎಂದು ಅವರಿಗೆ ಹೇಳಬೇಕಿತ್ತು. ಈ ವಿಷಯದಲ್ಲಿ ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಅಜಾದ್ ಇತ್ತೀಚೆಗೆ ಹೇಳಿರುವ ಮಾತು ನೂರಕ್ಕೆ ನೂರರಷ್ಟು ಸತ್ಯ. ಕಾಶ್ಮೀರದಲ್ಲಿ ಈಗ ಇರುವ ಮುಸ್ಲಿಂರ ಮೂಲ ಹಿಂದು ಧರ್ಮವೇ. ಬಳಿಕ ಅನೇಕರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂಬ ಅವರ ಹೇಳಿಕೆ ಸ್ವಾಗತಾರ್ಹ ಎಂದರು.
ದೇಶದೊಳಗೇ ಇದ್ದುಕೊಂಡು ರಾಷ್ಟ್ರ ವಿರೋಧಿಗಳಾಗಿ ಕೆಲಸ ಮಾಡುವವರು ಒಂದೆಡೆಯಾದರೆ, ಈಶಾನ್ಯ ರಾಜ್ಯಗಳಲ್ಲಿ ಮತಾಂತರ ಮಾಡುತ್ತ, ಗಲಭೆಗಳನ್ನು ಬೆಂಬಲಿಸುತ್ತಿರುವ ಮಿಷನರಿಗಳು ಇನ್ನೊಂದೆಡೆ. ಮೂರನೆಯವರು ಬುದ್ಧಿಜೀವಿಗಳು, ಮಾವೋವಾದಿಗಳು. ಅವರೆಲ್ಲರೂ ಹಿಂದು ವಿರೋಧಿ ಮನಸ್ಥಿತಿಯವರು. ಈಗ ಸಿಎಂ ಸಿದ್ದರಾಮಯ್ಯ ಸುತ್ತ ಇರುವವರು ಇದೇ ವರ್ಗಕ್ಕೆ ಸೇರಿದವರು ಎಂದು ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದರು.

ಹಿಂದುಗಳದ್ದೇ ಅಡ್ಡಗಾಲು
ಸರ್ಕಾರ ಗೋಹತ್ಯೆ ನಿಷೇಧ ಮಾಡಲು ಮುಂದಾದರೆ ಅದನ್ನು ವಿರೋಧಿಸುವವರು ಮುಸ್ಲಿಂರಲ್ಲ. ಬದಲಿಗೆ ಹಿಂದುಗಳು. ಕುರಿ, ಕೋಳಿಗಳನ್ನು ಹತ್ಯೆ ಮಾಡುವುದಾದರೆ ಗೋವನ್ನು ಏಕೆ ಹತ್ಯೆ ಮಾಡಬಾರದು ಎಂದು ಹಿಂದು ಸಚಿವರೊಬ್ಬರು ಪ್ರಶ್ನೆ ಮಾಡುತ್ತಾರೆ. ಮೇಲುಕೋಟೆ, ಕೊಡಗಿನಲ್ಲಿ ಹಿಂದುಗಳ ಮಾರಣಹೋಮ ನಡೆಸಿದ ಟಿಪ್ಪು ಸುಲ್ತಾನ್ ಜಯಂತಿ ಮಾಡಬೇಕೆಂದು ಮುಸ್ಲಿಂರು ಒತ್ತಾಯಿಸುವುದಿಲ್ಲ. ಬದಲಿಗೆ ಆದೇಶ ಮಾಡುವುದು ಓರ್ವ ಹಿಂದು ಸಿಎಂ. ಇದು ಇಂದಿನ ವಿಪರ್ಯಾಸಗಳು. ಇವರ ಮನಸ್ಥಿತಿ ಕುರಿತು ವಿಶೇಷ ಅಧ್ಯಯನ ನಡೆಸಬೇಕಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ರಾಹುಲ್ ನಡೆಗೆ ಕಿಡಿ
ಭಾಷೆ, ಸಂಸ್ಕೃತಿ ಭಿನ್ನವಾಗಿದ್ದರೂ ಆಲೋಚನೆ ಒಂದೇ ಆಗಿದ್ದಲ್ಲಿ ಮಾತ್ರ ರಾಷ್ಟ್ರ ಸದೃಢವಾಗಿರುತ್ತದೆ. ಆದರೆ ನಮ್ಮ ದೇಶಕ್ಕೆ ಮುಂದೊಂದು ದಿನ ಪ್ರಧಾನಿಯಾಗುತ್ತೇನೆ ಎಂದು ಹೇಳಿಕೊಳ್ಳುವ ರಾಹುಲ್ ಗಾಂಧಿ, ಚೀನಾ ದೇಶ ಭಾರತದ ಭೂಭಾಗವನ್ನು ಅತಿಕ್ರಮಣ ಮಾಡಿದೆ ಎಂದು ಸುಮ್ಮನೇ ಹೇಳುತ್ತಾರೆ. ಇದರಿಂದ ಭಾರತದ ಬಗ್ಗೆ ವಿಶ್ವದ ದೃಷ್ಟಿಕೋನ ಏನಾಗಬಹುದೆಂಬ ಕಲ್ಪನೆಯೂ ಅವರಿಗೆ ಇದ್ದಂತಿಲ್ಲ ಎಂದು ಸೂಲಿಬೆಲೆ ಕಿಡಿಕಾರಿದರು. ಒಂದು ಕಾಲದಲ್ಲಿ ಕಾಶ್ಮೀರಕ್ಕೆ ಹೋಗಲು ಭಾರತೀಯರೇ ಹಿಂದೇಟು ಹಾಕುತ್ತಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಲ್ಲಿಗೆ ಬರಲು ಪಾಕಿಸ್ತಾನಿಯರು ಹೆದರುತ್ತಿದ್ದಾರೆ. ಇದು ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಆಗಿರುವ ಬದಲಾವಣೆ ಎಂದರು.
ಬಿಗಿ ಬಂದೋಬಸ್ತ್
ಕಳೆದ ವಾರವಷ್ಟೇ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಪಿಸಿಸಿ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷ ಸೌಗಂಧಿಕಾ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಬಹುದು ಎಂಬ ಕಾರಣಕ್ಕೆ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net