

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 10 ತಿಂಗಳಾಗಿದ್ದರೂ ಟೇಕಾಫ್ ಆಗಿಲ್ಲ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಆರೋಪಿಸಿದರು.
ನೀರಿನ ಅಭಾವವಿದ್ದರೂ ತಮಿಳುನಾಡಿಗೆ ಕಾವೇರಿ ನೀರನ್ನು ಕದ್ದುಮುಚ್ಚಿ ಬಿಡುಗಡೆ ಮಾಡಲಾಗುತ್ತಿದೆ. ಶುದ್ಧ ನೀರಿನ ಘಟಕಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ರೈತ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಶಕ್ತಿಸೌಧದ ಒಳಗಡೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರನ್ನು ಇದುವರೆಗೂ ಬಂಧಿಸಿಲ್ಲ. ರಾಷ್ಟ್ರೀಯತೆ ವಿರೋಧಿ ಕ್ರಮಕ್ಕೆ ಗಮನಹರಿಸದೆ ಮುಸ್ಲಿಮರ ಓಲೈಕೆ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಇದು ಹಿಂದು ವಿರೋಧಿ ಸರ್ಕಾರವಾಗಿದೆ ಎಂದು ಆರೋಪಿಸಿದರು.
ತನ್ನ ವೈಲ್ಯಗಳನ್ನು ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ಬೊಟ್ಟು ತೋರಿಸುತ್ತಿರುವ ಕಾಂಗ್ರೆಸ್ ಸರ್ಕಾರ ದಮನಕಾರಿ ನೀತಿ ಅನುಸರಿಸುತ್ತಿದೆ. ಪಕ್ಷದ ಹೈಕಮಾಂಡ್ ಓಲೈಸುವ ದೃಷ್ಟಿಯಿಂದ ಕಾಟಾಚಾರದ ಆಡಳಿತ ನಡೆಯುತ್ತಿದೆ ಎಂದು ದೂರಿದರು. ಮಾಲತೇಶ್, ಚಂದ್ರಶೇಖರ್, ವಿನ್ಸೆಂಟ್ ರೋಡ್ರಿಗಸ್, ಹೃಷಿಕೇಶ್ ಪೈ, ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.