ಮಾದಕವಸ್ತು ಸೇವನೆ ಅಪರಾಧ

web 1
Published on

ಧಾರವಾಡ: ಪ್ರಸ್ತುತ ಪರಿಸ್ಥಿಯಲ್ಲಿ ಮಾದಕ ವಸ್ತುಗಳ ಸೇವನೆ ಯುವ ಜನರಲ್ಲಿ ಅದರಲ್ಲೂ ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತಿದೆ. ಇದಕ್ಕೆ ಮನೆಯ ವಾತಾವರಣ ಹಾಗೂ ಸನ್ನಿವೇಶಗಳು ಕಾರಣವಾಗಬಹುದು. ತಂದೆ ಅಥವಾ ಮನೆಯ ಯಜಮಾನ ಮನೆಯಲ್ಲಿ ಮಾದಕವಸ್ತು ಸೇವನೆ ಮಾಡುತ್ತಿದ್ದರೆ ಮಕ್ಕಳು ಅನುಕರಣೆ ಮಾಡುವ ಸಾಧ್ಯತೆ ಹೆಚ್ಚು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎ್. ದೊಡ್ಡಮನಿ ಹೇಳಿದರು.
ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕವಸ್ತು ಸೇವನೆ ಹಾಗೂ ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಪಾಟಿಗಳು ತಂಬಾಕು, ಗಾಂಜಾ ಹಾಗೂ ಇತರೆ ಮಾದಕವಸ್ತುಗಳನ್ನು ಸೇವನೆ ಮಾಡಲು ಪ್ರೇರೇಪಿಸುತ್ತಾರೆ. ಯುವ ಜನರು ತಪ್ಪು ಕಲ್ಪನೆ ಹಾಗೂ ಆಹ್ಲಾದಕ್ಕಾಗಿ ಮಾದಕವಸ್ತುಗಳ ಚಟಕ್ಕೆ ಬಲಿಯಾಗುತ್ತಿದ್ದಾರೆ. ಮಕ್ಕಳಲ್ಲಿ ಧೈರ್ಯ, ಆತ್ಮವಿಸ್ವಾಸ ತುಂಬುವಲ್ಲಿ ಕುಟುಂಬದ ಸದಸ್ಯರು ಹಾಗೂ ಶಿಕ್ಷಕರ ಪಾತ್ರ ಪ್ರಮುಖವಾದುದು ಎಂದರು.
ಜಿಲ್ಲಾ ನಿವೃತ್ತ ನ್ಯಾಯಾಧೀಶ ದೇವೇಂದ್ರ ಆರ್. ರೇಣಕೆ ಅತಿಥಿಯಾಗಿ ಪಾಲ್ಗೊಂಡಿದ್ದರು. ಡಿಎಚ್‌ಒ ಡಾ. ಶಶಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕಾರಾಗೃಹದ ಅಧೀಕ್ಷಕ ಎಂ.ಎ. ಮರಿಗೌಡ, ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ, ವೈದ್ಯಕೀಯ ಅಧೀಕ್ಷಕಿ ಡಾ. ಸರಸ್ವತಿ ಎನ್. ತೆನಗಿ, ಇತರರಿದ್ದರು.
ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಎಸ್.ಬಿ. ಕಳಸೂರಮಠ  ಸ್ವಾಗತಿಸಿದರು. ಕೇಂದ್ರ ಕಾರಾಗೃಹದ ಶಿಕ್ಷಕ ಪಿ.ಬಿ. ಕುರಬೇಟ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net