ಹುಬ್ಬಳ್ಳಿ: ತಾಲೂಕಿನ ಉಣಕಲ್ಲ ಗ್ರಾಮದ ತರಳಬಾಳು ಕ್ಯಾಂಪಸ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಗ್ರಾಮೀಣ ವಲಯ ವತಿಯಿಂದ ವಿಶ್ವ ಮಾದಕ ವಸ್ತು ವಿರೋಧಿ ದಿನ ಆಚರಿಸಲಾಯಿತು.
ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಭಾಸ್ಕರ್ ಅವರು ಮಾತನಾಡಿ, ಆರಂಭದಲ್ಲಿ ಮಜಾ ಕೊಡುವ ತಂಬಾಕು ಸೇರಿ ಮಾದಕ ವಸ್ತುಗಳು ನಂತರದಲ್ಲಿ ಚಟವಾಗಿ ಪರಿಣಮಿಸುತ್ತವೆ. ಇವುಗಳ ನಿರಂತರ ಸೇವನೆಯಿಂದ ಅನೇಕ ದುಷ್ಪರಿಣಾಮಗಳು ದೇಹದ ಮೇಲೆ ಆಗುತ್ತವೆ. ಜತೆಗೆ ಮಾನಸಿಕ ಆರೋಗ್ಯವೂ ಹದಗೆಡುತ್ತದೆ. ವಿದ್ಯಾರ್ಥಿಗಳು ಇವುಗಳ ಹಿಂದೆ ಬೀಳದೇ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆರ್.ಕೆ. ಕೊಕಾಟಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಿವಕುಮಾರಗೌಡ ಬಿ.ಜಿ. ಮಾತನಾಡಿದರು.
ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯರಾದ ಎಸ್.ಎಸ್. ಪಾಟೀಲ, ಮಾರುತಿ ಶೇಟ್, ಪಿಯು ಕಾಲೇಜಿನ ಪ್ರಾಚಾರ್ಯ ಮೇಘಾ ಎಂ.ಜೆ. ಹಾಗೂ ಸಿಬ್ಬಂದಿ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಮಂಜುಳಾ, ವಲಯ ಮೇಲ್ವಿಚಾರಕ ನಾಗರಾಜ್, ಸ್ಥಳಿಯ ಸೇವಾ ಪ್ರತಿನಿಧಿಗಳು, ಉಪನ್ಯಾಸಕರಾದ ಸಾವಿತ್ರಿ ಹಳ್ಳಿ, ವಿರೇಶ ಪಾಟೀಲ, ಮನೋಜ ಮನಗುಂಡಿ, ನಂದಾ ಕುಲಕರ್ಣಿ, ಗಣೇಶ ಮಾಂಡೇಕರ್, ಬಸವರಾಜ ಕುರ್ತಕೋಟಿ ಇತರರು ಪಾಲ್ಗೊಂಡಿದ್ದರು.