

ಕೊಪ್ಪಳ: ಹಣ, ಅಧಿಕಾರ, ಆಸ್ತಿ ಎಲ್ಲದಕ್ಕಿಂತ ವ್ಯಸನಮುಕ್ತರಾಗಿ ಆರೋಗ್ಯಯುತ ಜೀವನ ನಡೆಸುವುದೇ ನಿಜವಾದ ಅಭಿವೃದ್ಧಿ ಎಂದು ಮಂಗಳೂರು ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ.ಪ್ರಭುರಾಜ ನಾಯಕ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ವಾರ್ತಾ ಇಲಾಖೆಯಿಂದ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನ ಅಂಗವಾಗಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.
ವ್ಯಸನದಲ್ಲಿ ಎರಡು ವಿಧ ಇದೆ. ಒಳ್ಳೆಯ, ಅಭಿವೃದ್ಧಿ ಪೂರಕವಾಗಿರುವುದು ಒಂದಾದರೆ, ಮತ್ತೊಂದು ಕುಟುಂಬ ಹಾಗೂ ಸಮಾಜ ಹಾಳು ಮಾಡುವಂಥದ್ದು. ಓದು, ಹಾಡು, ನೃತ್ಯ, ಕವಿತೆ, ಕಥೆ ಹೀಗೆ ಉತ್ತಮ ವ್ಯಸನ ರೂಢಿಸಿಕೊಳ್ಳಬೇಕು. ಯುವಕರು ಮಾದಕ ವಸ್ತುಗಳು, ಸಾಮಾಜಿಕ ಜಾಲತಾಣ, ಮೊಬೈಲ್ನಿಂದ ಸಾಧ್ಯವಾದಷ್ಟು ದೂರವಿರಿ. ದುರ್ವ್ಯಸನ ಕೆಟ್ಟದನ್ನು ಪ್ರೇರೇಪಿಸುತ್ತದೆ. ಅವರ ಕುಟುಂಬ, ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಹಾಂತ ಶಿವಯೋಗಿಗಳು ಭಕ್ತರಿಂದ ದುಶ್ಚಟಗಳನ್ನು ಭಿೆಯಾಗಿ ಪಡೆದು ಉದ್ಧರಿಸುವ ಕೆಲಸ ಮಾಡಿದರು. ಅವರ ಸಾಮಾಜಿಕ ಕಳಕಳಿ ಕಾರಣ ಅವರ ಜನ್ಮದಿನವನ್ನು ವ್ಯಸನ ಮುಕ್ತದಿನವಾಗಿ ಆಚರಿಸಲಾಗುತ್ತಿದೆ ಎಂದರು.
ಮುನಿರಾಬಾದ್ ಐಆರ್ಬಿ ಡೆಪ್ಯೂಟಿ ಕಮಾಂಡೆಂಟ್ ರಾಧಾಕೃಷ್ಣ ಅಡಾವತ್ ಮಾತನಾಡಿ, ಯುವಕರು ಹೆಚ್ಚಾಗಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. ರಾಜ್ಯವೊಂದರಲ್ಲಿ ಅವೈಜ್ಞಾನಿಕವಾಗಿ ಮಾದಕ ಸೇವಿಸಿದ ಯುವಕ ಎಚ್ಐವಿಗೆ ತುತ್ತಾಗಿದ್ದಾನೆ. ಮಾದಕ ವಸ್ತುಗಳ ಬಳಕೆ ನಮ್ಮ ವಿವೇಚನೆ ಕಸಿಯುತ್ತದೆ ಎಂದು ವಿವರಿಸಿದರು.
ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪಿ.ಬಿ.ಗೌಡರ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿದರು. ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಡಾ.ಕೃಷ್ಣಮೂರ್ತಿ ದೇಸಾಯಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ವಯಸ್ಕರ ಶಿಕ್ಷಣಾಧಿಕಾರಿ ವೆಂಟಕೇಶ ಕೊಂಕಲ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ಪ್ರಮುಖರಾದ ಶೇಖರ ಇಂಗಳದಾಳ, ಗುಡದಪ್ಪ ಹಡಪದ ಇತರರಿದ್ದರು.
ವಿಶೇಷ ಜಾಗೃತಿ ಜಾಥಾ
ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ವಾರ್ತಾ ಇಲಾಖೆಯಿಂದ ಗುರುವಾರ ನಗರದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಪಿ.ಬಿ.ಹಿರೇಗೌಡರ ಚಾಲನೆ ನೀಡಿದರು. ಜಿಲ್ಲಾಸ್ಪತ್ರೆ ಆವರಣದಿಂದ ಜಿಲ್ಲಾಡಳಿತ ಭವನದವರೆಗೆ ಜಾಥಾ ನಡೆಸಲಾಯಿತು. ಭಾಗ್ಯನಗರದ ನವಚೇತನ ಪಿಯು ಕಾಲೇಜು, ಜ್ಞಾನಬಂಧು ಪಿಯು ಕಾಲೇಜು, ಕೊಪ್ಪಳದ ಲಯನ್ಸ್ ಪಿಯು ಕಾಲೇಜು, ಅಲ್ಪಸಂಕ್ಯಾತರ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯಗಳ ವಿದ್ಯಾರ್ಥಿಗಳು, ಉಪನ್ಯಾಸಕರು, ಅಧಿಕಾರಿಗಳು ಲಕಗಳೊಂದಿಗೆ ಜಾಗೃತಿ ಮೂಡಿಸಿದರು.