ನಂಜನಗೂಡು: ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ವಿಶೇಷ ಅನುದಾನವನ್ನು ಸಮುದಾಯದ ಆರ್ಥಿಕ ಏಳಿಗೆಯ ಪೂರಕ ಉದ್ದೇಶಗಳಿಗೆ ಬಳಕೆ ಮಾಡದೆ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದಲಿತ ಸಂಘಟನೆಯ ಹಿರಿಯ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್ ಹೇಳಿದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಎಸ್ಸಿ, ಎಸ್ಟಿ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದರಿಂದಾಗಿ ಎಸ್ಸಿ, ಎಸ್ಟಿ ಸಮುದಾಯ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಎಸ್ಸಿ, ಎಸ್ಟಿ, ಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡುತ್ತದೆ ಎಂದು ತಿಳಿದು ಸಂಘಟನೆಗಳು ಹಗಲಿರುಳು ದುಡಿದು ಅಧಿಕಾರಕ್ಕೆ ತಂದೆವು. ಆದರೆ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ, ಎಸ್ಟಿ ಅನುದಾನ ಬಳಸಿಕೊಂಡು ಸಮುದಾಯಕ್ಕೆ ದ್ರೋಹ ಬಗೆಯುತ್ತಿದೆ. ಸರ್ಕಾರದ ಈ ನಿಲುವನ್ನು ಪ್ರಶ್ನಿಸಬೇಕಿದ್ದ ಎಸ್ಸಿ, ಎಸ್ಟಿ ಸಮುದಾಯದ ಶಾಸಕರು ಜಾಣ ಮೌನ ವಹಿಸಿರುವುದಕ್ಕೆ ನಮ್ಮ ವಿರೋಧವಿದೆ. ಕೂಡಲೇ ಎಸ್ಸಿ, ಎಸ್ಟಿ ಸಮುದಾಯದ ಶಾಸಕರು ಸದನದಲ್ಲಿ ಧ್ವನಿ ಎತ್ತುವ ಮೂಲಕ ಸಮುದಾಯದ ಹಿತಾಸಕ್ತಿ ಕಾಪಾಡಲು ಮುಂದಾಗಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಗರ್ಲೆ ವಿಜಯ್‌ಕುಮಾರ್ ಮಾತನಾಡಿ, ಸರ್ಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ನಿಯೋಗವು ಶುಕ್ರವಾರ ಮುಖ್ಯಮಂತ್ರಿಗಳನ್ನು, ಮತ್ತು ಸಮಾಜ ಕಲ್ಯಾಣ ಸಚಿವರನ್ನು ಬೇಟಿ ಮಾಡಿ ಖುದ್ದು ಮನವಿ ಸಲ್ಲಿಸಲಿದೆ ಎಂದರು. ಮಲ್ಲಹಳ್ಳಿ ನಾರಾಯಣ್, ಕಾರ್ಯ ಬಸವಣ್ಣ, ಸುರೇಶ್, ಅಭಿ ನಾಗಭೂಷಣ, ಜಯಶಂಕರ್ ಇದ್ದರು.