

ಮಂಡ್ಯ: ದೇಶದ ಅಭಿವೃದ್ಧಿಗಾಗಿ ಅಧಿಕಾರಿಗಳು ಭ್ರಷ್ಟಾಚಾರ ಮುಕ್ತವಾಗಿ ಕೆಲಸ ಮಾಡಬೇಕು ಎಂದು ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ವತಿಯಿಂದ ಆಯೋಜಿಸಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹದಲ್ಲಿ ಅಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು, ಕೆಲಸ ಪಡೆಯುವಾಗ ಭ್ರಷ್ಟಾಚಾರ ಮುಕ್ತವಾಗಿ ಕರ್ತವ್ಯ ಮಾಡುತ್ತೇವೆಂದು ಪ್ರತಿಜ್ಞಾವಿಧಿ ಸ್ವೀಕಾರ ಮಾಡುತ್ತೇವೆ. ಅದರಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಭ್ರಷ್ಟಾಚಾರ ಹೆಚ್ಚಾದರೆ ದೇಶದ ಪರಿಸ್ಥಿತಿ ಹರಾಜಕತೆ ಕಾಣಬಹುದು. ಆಫ್ರಿಕಾ ಭಾಗದ ಕೆಲವು ದೇಶ ಅಭಿವೃದ್ಧಿ ಹೊಂದದಂತಿವೆ. ಬ್ರಿಟನ್, ಜರ್ಮನ್ ದೇಶಗಳು ಅಭಿವೃದ್ಧಿ ಹೊಂದಿವೆ. ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಭ್ರಷ್ಟಾಚಾರ ಶೂನ್ಯವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲಿ ಹಿಂದುಳಿದ ದೇಶವಿದೆಯೋ ಅಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹಾಳಾಗಿದೆ ಎಂಬುದಾಗಿರುತ್ತದೆ. ಹಾಗಾಗಿ ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಿದರೆ ಆ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.
ಮರಣ ಹೊಂದಿದಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ಕೆಲಸ ಮಾಡುವ ಸಂದರ್ಭದಲ್ಲಿ ಒಂದು ಬದ್ಧತೆಯನ್ನು ಇಟ್ಟುಕೊಂಡು ಜನಸಾಮಾನ್ಯರ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟರೆ, ಅವರನ್ನು ಜನರೇ ಪ್ರೀತಿಯಿಂದ ಉತ್ತಮ ಅಭಿಪ್ರಾಯ ಹೇಳುತ್ತಾರೆ. ಲಂಚ ತೆಗೆದುಕೊಂಡು ಕೆಲಸ ಮಾಡಿಕೊಟ್ಟರೆ ಅವನೇ ಈ ಸಮಾಜದ ಮೊದಲ ಶತ್ರುವಾಗುತ್ತಾನೆ. ಈ ನಿಯಮ ಬದಲಾಗಿ ಉತ್ತಮವಾಗಿ ಕೆಲಸ ಮಾಡಿ ಹೆಸರು ಮಾಡಿ ಎಂದು ಸಲಹೆ ನೀಡಿದರು.
ಲೋಕಾಯುಕ್ತ ಇನ್‌ಸ್ಪೆಕ್ಟರ್ ಪ್ರಕಾಶ್ ಮಾತನಾಡಿ, ಸರ್ಕಾರಿ ಕೆಲಸಗಳು ಎಲ್ಲರಿಗೂ ಸಿಗುವುದಿಲ್ಲ. ಅದು ದೇವರ ಕೆಲಸದಂತೆ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಿ ತೋರಿಸಬೇಕು. ಅತಿಯಾದ ಆಸೆಯಿಂದ ಭ್ರಷ್ಟಾಚಾರಕ್ಕೆ ಸಿಲುಕಿ ಸರ್ಕಾರಿ ಹುದ್ದೆ ಕಳೆದುಕೊಂಡ ಮೇಲೆ ಪಶ್ಚಾತಾಪಪಟ್ಟರೆ ಏನೂ ಪ್ರಯೋಜನವಿಲ್ಲ. ಹಾಗಾಗಿ ಮೊದಲೇ ಪ್ರಾಮಾಣಿಕವಾಗಿ ದುಡಿಯುವ ಮನೋಭಾವ ಬೆಳೆಸಿಕೊಳ್ಳಿ ಎಂದು ತಿಳಿಸಿದರು.
ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ, ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಮೋಹನ್‌ರೆಡ್ಡಿ, ಬ್ಯಾಟರಾಯಗೌಡ, ಸಿಬ್ಬಂದಿ ಮಹದೇವಸ್ವಾಮಿ ಇತರರಿದ್ದರು.