ಮತಾಂತರ ತಡೆ ಮಸೂದೆ ಕರಡು ಸಿದ್ಧ; ಶಾಲೆ, ಸರ್ಕಾರಿ ಸೇವಾ ದಾಖಲೆಯಲ್ಲೂ ಉಲ್ಲೇಖ ಕಡ್ಡಾಯ

Front Anchor
Published on

ಬೆಳಗಾವಿ: ರಾಜಕೀಯವಾಗಿ ಸಂಚಲನ ಸೃಷ್ಟಿಸಿ, ಕಾವೇರಿದ ಚರ್ಚೆಗೆ ಕಾರಣವಾಗಿರುವ ಮತಾಂತರ ತಡೆ ಮಸೂದೆಯ ಕರಡು ಸಿದ್ಧವಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಮಂಡನೆಯೊಂದೇ ಬಾಕಿಯಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಸುವರ್ಣ ವಿಧಾನಸೌಧದ ಗೃಹ ಸಚಿವರ ಕೊಠಡಿಯಲ್ಲಿ ಸಚಿವರಾದ ಆರಗ ಜ್ಞಾನೇಂದ್ರ ಮತ್ತು ಜೆ.ಸಿ.ಮಾಧುಸ್ವಾಮಿ ಸಮಕ್ಷಮ ಮಂಗಳವಾರ ಗೃಹ ಮತ್ತು ಕಾನೂನು ಇಲಾಖೆಗಳ ಉನ್ನತಮಟ್ಟದ ಸಭೆ ನಡೆಯಿತು. ಕರಡು ವಿಧೇಯಕ (ಡ್ರಾಫ್ಟ್ ಬಿಲ್) ದಲ್ಲಿರುವ ಪ್ರತಿ ಅಂಶಗಳ ಬಗ್ಗೆ ವಿಶ್ಲೇಷಿಸಿ, ಅಂತಿಮ ಸ್ಪರ್ಶ ನೀಡಲಾಗಿದೆ.

ತೊಡಕು ನಿವಾರಣೆ: ಮುಖ್ಯವಾಗಿ ಕಾನೂನು-ತಾಂತ್ರಿಕ ತೊಡಕು ನಿವಾರಣೆಗೆ ಸರ್ಕಾರ ಒತ್ತು ನೀಡಿದೆ. ಮಸೂದೆಗೆ ವಿಧಾನ ಮಂಡಲದ ಉಭಯ ಸದನಗಳ ಒಪ್ಪಿಗೆ, ರಾಜ್ಯಪಾಲರು ಅಂಕಿತ ಹಾಕಿದ ಬಳಿಕ ಜಾರಿಗೆ ಬರುವ ಕಾನೂನಿಗೆ ಯಾವುದೇ ಹಂತದ ನ್ಯಾಯಾಲಯದಲ್ಲಿ ಅಡೆ-ತಡೆ ನಿವಾರಿಸುವ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಬಲವಂತದ ಮತಾಂತರ ನಿಷೇಧಕ್ಕೆ ಸಂವಿಧಾನಾತ್ಮಕವಾಗಿ ಮಾನ್ಯತೆಗೆ ಅನುಗುಣವಾಗಿ ಅಂಶಗಳಿಗೆ ಆದ್ಯತೆ ನೀಡಿದೆ. ಈ ಕಾಯ್ದೆ ಜಾರಿಗೆ ತರಲೇಬೇಕು ಎಂದು ಬಿಜೆಪಿ ಪಣ ತೊಟ್ಟಿದ್ದು, ಅದೇ ಕಾಲಕ್ಕೆ ಕೋರ್ಟ್​ಗಳಲ್ಲಿ ಮುಖಭಂಗವಾಗದಂತೆ ಎಚ್ಚರಿಕೆ ಹೆಜ್ಜೆಯಿಟ್ಟಿದೆ.

ಹೈಬ್ರಿಡ್ ಮಸೂದೆ: ಗುಜರಾತ್, ಮಧ್ಯಪ್ರದೇಶದಲ್ಲಿ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆಯಲ್ಲಿರುವ ಹೆಚ್ಚಿನ ಅಂಶ ಸಮೀಕರಿಸಿ, ಹೈಬ್ರಿಡ್ ಮಸೂದೆ ರೂಪಿಸಲಾಗಿದೆ. ಬಿಜೆಪಿ ಆಡಳಿತವಿರುವ ಉಳಿದ ರಾಜ್ಯಗಳಿಗೆ ಮಾದರಿಯಾಗುವ ರೀತಿಯಲ್ಲಿ ರೂಪಿಸಬೇಕು ಎನ್ನುವುದು ವರಿಷ್ಠರ ಅಪೇಕ್ಷೆಯಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಮಾಧುಸ್ವಾಮಿ, ಆರಗ ಜ್ಞಾನೇಂದ್ರ ಹಿರಿಯ ಅಧಿಕಾರಿಗಳ ಜತೆಗೆ ವಿಚಾರ ವಿಮರ್ಶೆ ಮಾಡಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.

ಪ್ರಮುಖ ಅಂಶಗಳು: ಮತಾಂತರ ಮದುವೆಗೆ ತಿಂಗಳ ಮುಂಚೆ ಆಯಾ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು, ಇದಾದ ಬಳಿಕ ಮದುವೆಗೆ ಇಚ್ಛಿತರ ಶಾಲೆ ಮೂಲ ದಾಖಲೆಗಳು ಮತ್ತು ಸರ್ಕಾರಿ ಹುದ್ದೆಯಲ್ಲಿದ್ದರೆ ಸೇವಾ ರಿಜಿಸ್ಟರ್​ನಲ್ಲೂ ಧರ್ಮದ ಹೆಸರು ಬದಲಾವಣೆ, ಆಯಾ ಜಾತಿ ಅನುಸಾರ ಪಡೆದ ಬಡ್ತಿ ಸೇರಿದಂತೆ ಮೀಸಲು ಸವಲತ್ತು ಕಡಿತ ಇತ್ಯಾದಿ ಪ್ರಮುಖ ಅಂಶಗಳನ್ನು ವಿಧೇಯಕ ಒಳಗೊಂಡಿದೆ ಎಂದು ತಿಳಿದಿದೆ.

ಗುರುವಾರ ಸಂಪುಟ ಸಭೆ?: ವಾರಾಣಸಿಯಲ್ಲಿ ನಡೆದ ಬಿಜೆಪಿ ಸಿಎಂಗಳ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಸಂಜೆ ಬೆಳಗಾವಿಗೆ ಮರಳಿದ್ದಾರೆ. ಬುಧವಾರ ವಿವಿಧ ಸಂಘಟನೆಗಳೊಂದಿಗೆ ಸಿಎಂ ಮಾತುಕತೆ ನಿಗದಿಯಾಗಿದ್ದು, ಗುರುವಾರ ಸಚಿವ ಸಂಪುಟ ಸಭೆ ನಡೆಯುವ ನಿರೀಕ್ಷೆಯಿದೆ. ಇದೇ ಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಕುರಿತು ರ್ಚಚಿಸಿ ಒಪ್ಪಿಗೆ ಪಡೆಯಲಿದೆ. ಅಧಿವೇಶನದಲ್ಲಿ ಸೋಮವಾರ ಅಥವಾ ಮಂಗಳವಾರ ಮಂಡಿಸಿ, ಎಷ್ಟೇ ವಿರೋಧ, ಗದ್ದಲ ಎದುರಾದರೂ ಅದೇ ದಿನ ಒಪ್ಪಿಗೆ ಪಡೆಯುವ ತಂತ್ರಗಾರಿಕೆ ಹೆಣೆಯಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net