ಮೆಚ್ಚುಗೆಗೆ ಪಾತ್ರವಾಗುತ್ತಿರುವ ಸಾಹಿತ್ಯ ಪ್ರಜ್ಞೆ: ಸಾಹಿತಿ ಮಂಜುಳಾ ಜಯಪ್ರಕಾಶಗೌಡ ಹೇಳಿಕೆ

Anthology release Mandya
Published on

ಮಂಡ್ಯ: ಸಾಹಿತ್ಯ ಕ್ಷೇತ್ರದಿಂದ ಹೊರಗಿರುವ ಕೆಲವರಲ್ಲಿ ಆಗಾಧ ಪ್ರತಿಭೆ ಇರುತ್ತದೆ. ಅಂತಹ ಸಾಹಿತ್ಯ ಪ್ರಜ್ಞೆ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ಸಾಹಿತಿ ಮಂಜುಳಾ ಜಯಪ್ರಕಾಶಗೌಡ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಐಡಿಯಲ್ ಪಬ್ಲಿಕೇಷನ್ಸ್ ವತಿಯಿಂದ ಆಯೋಜಿಸಿದ್ದ ಲೇಖಕಿ ಶುಭಶ್ರೀ ಪ್ರಸಾದ್ ಅವರ ಅನುದಿನವೂ ಅಭಿಜ್ಞಾನ ಕಥಾಸಂಕಲನ ಹಾಗೂ ಶ್ರೀ ನಿನಾದ ಕೃಷ್ಣನ ಹಾಡುಗಳ ಆಲ್ಬಮ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲೆಮರೆ ಕಾಯಿಯತಿರುವ ಅದೆಷ್ಟೋ ಯುವ ಸಾಹಿತಿಗಳು ತಮ್ಮ ಬರವಣಿಗೆ ಮೂಲಕ ಹೊರಬರಬೇಕು. ಇದರಿಂದ ತಾವು ಮಾಡುತ್ತಿರುವ ಕೆಲಸದ ಜತೆಗೆ ಸಾಹಿತ್ಯ ಪ್ರೀತಿಗೂ ಹೆಸರು ಬರುತ್ತದೆ ಎಂದು ಸಲಹೆ ನೀಡಿದರು.

ಶುಭಶ್ರೀ ಅವರು ಬ್ಯಾಂಕ್ ಉದ್ಯೋಗಿಯಾದರೂ ಸಾಹಿತ್ಯದ ಸಂಪರ್ಕ ಇಟ್ಟುಕೊಂಡು ಸೂಕ್ಷ್ಮ ಸಂವೇದನಾ ಲೇಖಕಿಯಾಗಿ ಕೃತಿ ರಚನೆ ಮಾಡಿದ್ದಾರೆ. ಸಾಹಿತ್ಯ ಯಾರ ಸ್ವತ್ತಲ್ಲ, ಅದು ತಮ್ಮೊಳಗಿರುವ ಒಂದು ಅದಮ್ಯ ಶಕ್ತಿ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಜತೆಗೆ ಅದರ ಜತೆ ಹೆಜ್ಜೆ ಇಡಬೇಕು. ಆಗಮಾತ್ರ ಸಾಹಿತ್ಯ ಪ್ರಜ್ಞೆ ಮೂಡಿ ಕೃತಿ ಮೂಲಕ ಪ್ರಚಾರವಾಗುತ್ತದೆ ಎಂದರು.

ಆಲ್ಬಮ್ ಬಿಡುಗಡೆ ಮಾಡಿದ ಗಾಯಕ ಶಶಿಧರ್ ಕೋಟೆ, ಮಂಡ್ಯಕ್ಕೆ ಬಂದಿರುವುದು ನನಗೆ ಸಂತೋಷವಾಗಿದೆ. ನಾನು ಶುಭಶ್ರೀ ಅಭಿಮಾನಿಯಾಗಿದ್ದೇನೆ. ಅವರದು ಬಹುಮುಖ ಪ್ರತಿಭೆ ಎಂದು ಶ್ಲಾಘಿಸಿದರು.

ಕಥಾಸಂಕಲನ ಕುರಿತು ವಿಶ್ರಾಂತ ಪ್ರಾಂಶುಪಾಲ ಎಸ್.ಬಿ.ಶಂಕರಗೌಡ ಮಾತನಾಡಿ, ಇದು ಗಂಭೀರವಾದ ಹಾಗೂ ಓದಿಸಿಕೊಂಡು ಹೋಗುತ್ತದೆ. ಕೃತಿಯಲ್ಲಿ ಉತ್ತಮ ಚಿಂತನೆಗಳಿವೆ ಎಂದರು. ಅಧ್ಯಕ್ಷತೆಯನ್ನು ಸಂಗೀತ ಸಂಯೋಜಕ ಕೆ.ಮುರುಳೀಧರ್ ಉಡುಪಿ ವಹಿಸಿದ್ದರು. ಐಡಿಯಲ್ ಪಬ್ಲಿಕೇಷನ್ಸ್‌ನ ಎಂ.ಎಸ್.ಶಿವಪ್ರಕಾಶ್, ಲೇಖಕಿ ಶುಭಶ್ರೀ ಪ್ರಸಾದ್ ಭಾಗವಹಿಸಿದ್ದರು. ನಂತರ ಶ್ರೀ ನಿನಾದ ಆಲ್ಬಮ್ ಗೀತೆ ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net