ಅಂತರಸನಹಳ್ಳಿಗೆ ಮೂಲಸೌಕರ್ಯ : ಶಾಸಕ ಜಿ.ಬಿ.ಜ್ಯೋತಿಗಣೇಶ್

1
Published on

ತುಮಕೂರು: ಅಭಿವೃದ್ಧಿ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪಾಲಿಕೆಯ 2ನೇ ವಾರ್ಡ್ ಅಂತರಸನಹಳ್ಳಿ ಎಸ್‌ಎಲ್‌ಎನ್ ಬಡಾವಣೆಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಬುಧವಾರ ಚಾಲನೆ ನೀಡಿದರು.

ಶಾಸಕನಾಗಿ ಆಯ್ಕೆಯಾದ ಮೇಲೆ ನಗರದ ಅಭಿವೃದ್ಧಿಗೆ ಕೊಟ್ಟಂತಹ 15 ಕೋಟಿ ರೂಪಾಯಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, 80 ಲಕ್ಷ ರೂ.ವೆಚ್ಚದಲ್ಲಿ 1.50 ಕಿಮೀ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

2ನೇ ವಾರ್ಡ್ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಬಡಾವಣೆ. ಅಂತರಸನಹಳ್ಳಿಯ ಕೆಲವು ಪ್ರದೇಶಗಳು ತುಮಕೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟರೆ, ಇನ್ನೂ ಕೆಲವು ಪ್ರದೇಶಗಳು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತಿರುವುದೇ ಇದಕ್ಕೆ ಕಾರಣ ಎಂದರು. ಯಾರಾದರೂ ಮನೆ ನಿರ್ಮಿಸಿದರೆ ಹೊರಹೋಗಲು, ಒಳಬರಲಾಗದಂತಹ ಪರಿಸ್ಥಿತಿ ಇದ್ದು, ಇಲ್ಲಿ ಭದ್ರತೆಗೆ ಆದ್ಯತೆ ನೀಡಲಾಗುವುದು, ಮೂಲಸೌಕರ್ಯ ಕಲ್ಪಿಸಲಾಗುವುದು. ಕಂದಾಯ ಇಲಾಖೆ ನಿವೇಶನ ಇರುವ ಈ ಬಡಾವಣೆಯಲ್ಲಿ ಮುಖ್ಯರಸ್ತೆಗಳು ಸೇರಿ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಪಾರ್ಕ್ ಅಭಿವೃದ್ಧಿ ಮಾಡಲಾಗುವುದು. ಎಸ್‌ಟಿಪಿ, ಟಿಎಸ್‌ಪಿ ಅನುದಾನವನ್ನೂ ಈ ಬಡಾವಣೆಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು. ಪಾಲಿಕೆ ಸದಸ್ಯರಾದ ಮಂಜುನಾಥ್, ವೆಂಕಟಪ್ಪ, ಎಸ್‌ಡಿಎಲ್.ಅಶೋಕ್ ಇದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡ ಅವರನ್ನು ಸೋಲಿಸಿ ನಮ್ಮ ತಂದೆ ಜಿ.ಎಸ್.ಬಸವರಾಜು ಅವರನ್ನು ಗೆಲ್ಲಿಸಲು 2ನೇ ವಾರ್ಡ್ ಜನರ ಕಾಣಿಕೆಯೂ ಇದೆ, ಇವರ ಋಣ ತೀರಿಸುವ ನಿಟ್ಟಿನಲ್ಲಿ ಅಭಿವೃದ್ಧಿಗೆ ಆಧ್ಯತೆ ನೀಡಲಾಗಿದೆ. ಜಿ.ಬಿ.ಜ್ಯೋತಿಗಣೇಶ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net