

ಪಾ.ಶ್ರೀ.ಅನಂತರಾಮ್ ಕೋಲಾರ
ಅಂತರಗಂಗೆ ವ್ಯಾಪ್ತಿಯ ತೇರಹಳ್ಳಿ ಬೆಟ್ಟ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದ್ದು, ಉದ್ಯಾನ ನಿರ್ಮಾಣ, ಟ್ರಕ್ಕಿಂಗ್ ಬರುವವರಿಗೆ ಮೂಲಸೌಕರ್ಯ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಕೋವಿಡ್ ಇಲ್ಲದಿದ್ದರೆ ಅಗತ್ಯ ಅನುದಾನ ಪಡೆದು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಇಲಾಖೆ ಉದ್ದೇಶಿಸಿತ್ತು. ಆದರೆ ಹಣಕಾಸು ಇಲಾಖೆ ಹೊಸ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಿಲ್ಲವೆಂದು ಹೇಳಿರುವುದರಿಂದ 2021ರಲ್ಲಿ ಅನುದಾನ ಮಂಜೂರು ಆಗಬಹುದೆಂಬ ನಿರೀಕ್ಷೆಯಲ್ಲಿದೆ.
ಅಂತರಗಂಗೆ ಬೆಟ್ಟವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಕಂದಾಯ ಇಲಾಖೆಯು ಈ ಪ್ರದೇಶವನ್ನು ಅರಣ್ಯ ಪ್ರದೇಶವನ್ನಾಗಿ ಪರಿಗಣಿಸಿ ಸೆಕ್ಷನ್ 71ರಡಿ ಇಲಾಖೆಗೆ ದಾಖಲೆ ಹಸ್ತಾಂತರಿಸಿದಲ್ಲಿ ಕಾನೂನು ಪ್ರಕಾರ ಒತ್ತುವರಿ ತೆರವುಗೊಳಿಸಿ ಶಾಶ್ವತ ಅಭಿವೃದ್ಧಿ ಅನುಷ್ಠಾನಕ್ಕೆ ತರಲು ಅರಣ್ಯ ಇಲಾಖೆ ತಯಾರಿದೆ.
ಇ-ಟ್ರಕ್ಕಿಂಗ್ ವ್ಯವಸ್ಥೆ: ಅನೇಕ ವರ್ಷಗಳಿಂದ ಟ್ರಕ್ಕಿಂಗ್ ನಡೆಯುತ್ತಿದ್ದರೂ ಸರ್ಕಾರಕ್ಕೆ ಆದಾಯ ಇಲ್ಲ. ಇ-ಟ್ರಕ್ಕಿಂಗ್ ವ್ಯವಸ್ಥೆ ಜಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಸರ್ಕಾರದಿಂದ ಮಾನ್ಯತೆ ಹೊಂದಿರುವ ಸಂಸ್ಥೆ ಸಹಯೋಗದಲ್ಲಿ ಯೋಜನೆ ಜಾರಿಗೆ ಬಂದಲ್ಲಿ ಯಾರು ಬೇಕಾದರೂ ಭಾಗವಹಿಸಲು ಅವಕಾಶ ಸಿಗಲಿದೆ.
ಟ್ರಕ್ಕಿಂಗ್‌ನಲ್ಲಿ ಭಾಗವಹಿಸುವವರು ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಬಹುದು. ಕೈಗೆಟುಕುವ ಶುಲ್ಕ ನಿಗದಿಪಡಿಸುವುದರಿಂದ ನಿರ್ವಹಣೆಗೆ ಹಣ ಕ್ರೋಡೀಕರಿಸಲು ಅನುಕೂಲವಾಗುತ್ತದೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
ಅನುದಾನಕ್ಕೆ ಪ್ರಸ್ತಾವನೆ: ಅಂತರಗಂಗೆ ಬೆಟ್ಟದಲ್ಲಿ ನೀಲಗಿರಿ ನಿರ್ಮೂಲನೆಗೆ ಒತ್ತು ನೀಡಬೇಕು, ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಕ್ಯಾಂಟೀನ್, ವಿಶ್ರಾಂತಿ ಗೃಹ ಇನ್ನಿತರ ಸೌಲಭ್ಯ ಸೇರಿ ಬೆಟ್ಟದ ಸೊಬಗು ಸವಿಯಲು ಬರುವ ಪ್ರವಾಸಿಗರಿಗೆ ಭದ್ರತೆ, ಸೌಕರ್ಯ ಕಲ್ಪಿಸಲು ಪ್ರಯತ್ನ ನಡೆಯುತ್ತಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದಲ್ಲಿ ಚಾರಣಿಗರಿಗೆ ಹೆಚ್ಚು ಪ್ರಯೋಜನವಾಗುವುದರಲ್ಲಿ ಅನುಮಾನವಿಲ್ಲ.
ಅನುದಾನವಿಲ್ಲದೆ ಯೋಜನೆ ಸ್ಥಗಿತ: ಎಲ್ಲ ತಾಲೂಕುಗಳಲ್ಲಿ ಸಾಲು ಮರದ ತಿಮ್ಮಕ್ಕ ಹೆಸರಲ್ಲಿ ಭವ್ಯ ಉದ್ಯಾನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಬಂಗಾರಪೇಟೆಯಲ್ಲಿ ನಿರ್ಮಾಣವಾಗಿದೆ, ಮುಳಬಾಗಿಲಲ್ಲಿ 3-4 ತಿಂಗಳಲ್ಲಿ ಉದ್ಘಾಟನೆಯಾಗುವ ನಿರೀಕ್ಷೆಯಿದೆ, ಉಳಿದ ತಾಲೂಕುಗಳಲ್ಲಿ ಅನುದಾನವಿಲ್ಲದೆ ಯೋಜನೆಗೆ ಚಾಲನೆ ಸಿಕ್ಕಿಲ್ಲ, ಸುಸಜ್ಜಿತ ಹಾಗೂ ಸುಂದರ ಉದ್ಯಾನವನ ನಿರ್ಮಾಣಕ್ಕೆ ಕನಿಷ್ಠ 50ರಿಂದ 1 ಕೋಟಿ ರೂ. ಬೇಕಿದ್ದು, ಸರ್ಕಾರ ಯಾವಾಗ ಅನುದಾನ ಬಿಡುಗಡೆ ಮಾಡುತ್ತದೋ ನೋಡಬೇಕು.
ಅಂತರಗಂಗೆ ಬೆಟ್ಟದಲ್ಲಿ ಇ-ಟ್ರಕ್ಕಿಂಗ್ ವ್ಯವಸ್ಥೆ ಜಾರಿಯಾದರೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹಾಗೂ ಅರಣ್ಯಾಭಿವೃದ್ಧಿಗೆ ಅನುಕೂಲವಾಗಲಿದೆ. ಚಾರಣಿಗರಿಗೆ ಮಾರ್ಗದರ್ಶನ ನೀಡಲು ಈಗಾಗಲೆ 5 ಮಂದಿಗೆ ಅರಣ್ಯ ಇಲಾಖೆಯಿಂದ ತರಬೇತಿ ನೀಡಲಾಗುತ್ತಿದೆ, ಬೆಟ್ಟವನ್ನು ಅರಣ್ಯ ಪ್ರದೇಶವೆಂದು ಘೋಷಿಸಲಾಗಿದ್ದು, ಕಂದಾಯ ಇಲಾಖೆಯಿಂದ ನಮಗೆ ದಾಖಲೆ ಹಸ್ತಾಂತರಿಸಿದರೆ ಅಭಿವೃದ್ಧಿಗೆ ಚಾಲನೆ ನೀಡುತ್ತೇವೆ. ಇ.ಶಿವಶಂಕರ್, ಡಿಸಿಎಫ್, ಕೋಲಾರ ಅಂತರಗಂಗೆ ಬೆಟ್ಟ ಮತ್ತು ದೇವರಾಯನಸಮುದ್ರ ಚಾರಣಿಗರಿಗೆ ಹೇಳಿ ಮಾಡಿಸಿದ ತಾಣ. ಆಸಕ್ತರಿಗೆ ತರಬೇತಿ ನೀಡಲು ಸರ್ಕಾರ ಅವಕಾಶ ನೀಡಿದಲ್ಲಿ ನನ್ನಲ್ಲಿರುವ ಅನುಭವ ಆಧರಿಸಿ ಮಾರ್ಗದರ್ಶನ ನೀಡಲು ಬದ್ಧ. ಸರ್ಕಾರ ಮೊದಲು ಬೆಟ್ಟ-ಗುಡ್ಡ, ಕಾಡು, ಮರ ಸಂರಕ್ಷಣೆ ಮಾಡಬೇಕು, ಇ-ಟ್ರಕ್ಕಿಂಗ್ ಯೋಜನೆಯಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಲಾಭವಾಗಲಿದೆ. ಚಂದ್ರಶೇಖರ ನಂಗಲಿ, ಸಾಹಿತಿ, ಸಂಶೋಧಕ, ಹಿರಿಯ ಚಾರಣಿಗ ಕೋಲಾರ