ಬಿಜೆಪಿಯಿಂದ ಸರ್ವಾಧಿಕಾರಿ ಧೋರಣೆ: ದಸಂಸ ಮುಖಂಡ ಇಂದೂಧರ ಹೊನ್ನಾಪುರ ಟೀಕೆ

Published on

ಮೈಸೂರು: ಬಿಜೆಪಿ ಹತ್ತು ವರ್ಷದಲ್ಲಿ ನಡೆದುಕೊಳ್ಳುತ್ತಿರುವ ಸರ್ವಾಧಿಕಾರಿ ಧೋರಣೆಯನ್ನು ಗಮನಿಸಿದರೆ ದೇಶದಲ್ಲಿ ಮುಂದೆ ಚುನಾವಣೆ ನಡೆಯುತ್ತದೋ, ಇಲ್ಲವೋ ಎನ್ನುವ ಆತಂಕ ಎದುರಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಮುಖಂಡ ಇಂದೂಧರ ಹೊನ್ನಾಪುರ ಹೇಳಿದರು.
1947ರಿಂದ ಆರಂಭವಾದ ದೇಶದ ಪ್ರಗತಿಯ ಪಯಣ ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್ ವರೆಗೆ ಸಾಗಿತ್ತು. ಆದರೆ 2014ರಿಂದ ಮೋದಿ ಪ್ರಧಾನಿ ಆದ ನಂತರ ದೇಶದಲ್ಲಿ ಪ್ರಗತಿ ಹಿಮ್ಮುಖ ಚಲನೆಯಾಗಿದೆ. 10 ವರ್ಷದಲ್ಲಿ ಅಭಿವೃದ್ಧಿಗಳೇ ಆಗಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಲೂಟಿಗೆ ಅವಕಾಶ: ಕೇಂದ್ರ ಸರ್ಕಾರ ಬಡವರ ಬಗ್ಗೆ ಚಿಂತಿಸದೆ ಕೇವಲ ಕಾರ್ಪೊರೇಟ್ ವಲಯಕ್ಕೆ ಲೂಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಸಮಾನತೆಯನ್ನೇ ಜೀವನ ಮಾಡಿಕೊಂಡ ವೈದಿಕಶಾಹಿ ಕೂಟ ನಾಗರಿಕರ ಬದುಕು, ಪ್ರೀತಿ, ವಿಶ್ವಾಸ ನಾಶ ಮಾಡಿದೆ ಎಂದು ದೂರಿದರು.
ಅಧಿಕಾರಕ್ಕೆ ಬರಬಾರದು: ದೇಶದಲ್ಲಿ ನಿರುದ್ಯೋಗ ನಿರಾತಂಕವಾಗಿ ಬೆಳೆಯುತ್ತಿದೆ. ಬೆಲೆಯೇರಿಕೆ ಮಿತಿ ಮೀರಿದೆ. ಇದರ ನಡುವೆ ಒಕ್ಕೂಟ ವ್ಯವಸ್ಥೆಗೆ ಅಡ್ಡಿ ಉಂಟಾಗುತ್ತಿದೆ. ಸಂವಿಧಾನದ ಮೌಲ್ಯಗಳಿಗೆ ಧಕ್ಕೆಯುಂಟಾಗಿದೆ. ತೆರಿಗೆ ಭಯೋತ್ಪಾದನೆ ಹೆಚ್ಚಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ದೇಶವನ್ನು ಉಳಿಸಿಕೊಳ್ಳಲು ಮತ್ತೆ ಬಿಜೆಪಿ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ದಸಂಸ ವಿವಿಧ ಬಣಗಳ ಮುಖಂಡರಾದ ಗುರುಪ್ರಸಾದ್ ಕೆರೆಗೋಡು, ಬೆಟ್ಟಯ್ಯಕೋಟೆ, ಮಾವಳ್ಳಿ ಶಂಕರ್, ಎಂ. ಸೋಮಶೇಖರ, ಜೀವವನಹಳ್ಳಿ ಆರ್. ವೆಂಕಟೇಶ, ಬೆನ್ನಿಗಾನಹಳ್ಳಿ ರಾಮಚಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net