‘ಯುವಕನಿಗೆ ಥಳಿತ’ ಮತ್ತೊಂದು ವಿಡಿಯೋ ವೈರಲ್

Hubballi crime
Published on

ಹುಬ್ಬಳ್ಳಿ: ನಗರದಲ್ಲಿ ಭಾರಿ ಸದ್ದು ಮಾಡಿರುವ ಯುವಕನೊಬ್ಬನನ್ನು ನಗ್ನಗೊಳಿಸಿ ಹಲ್ಲೆ ಮಾಡಿದ ಘಟನೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದೆ.

ಸಂದೀಪ ಎಂಬಾತನನ್ನು ನಗ್ನಗೊಳಿಸಿ ಹಲ್ಲೆ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ಪಡೆಯಲಾಗಿತ್ತು. ಶನಿವಾರ ಮತ್ತಿಬ್ಬರನ್ನು ಹು-ಧಾ ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

ಶನಿವಾರ ಮತ್ತೊಂದು ವಿಡಿಯೋ ವೈರಲ್ ಆದ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಯುವಕರು ಇದ್ದರು. ನಾಲ್ಕನೇ ವಿಡಿಯೋದಲ್ಲಿ
ಬಾಯಿ ತುಂಬ ರಕ್ತ ಬರುವಂತೆ ಹೊಡೆಯುತ್ತಿದ್ದರೂ ‘ನಾನಲ್ಲ ದಾದಾ, ನನ್ನ ಬಿಟ್ಟು ಬಿಡಿ’ ಎಂದು ಯುವಕ ಸಂದೀಪ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾನೆ. ಆದರೂ ಯುವಕರ ಗುಂಪು, ಯುವಕನ ಮುಖಕ್ಕೆ ಹೊಡೆಯುವುದನ್ನು ನೋಡಿದರೆ ಹಗೆ ತೀರಿಸಿಕೊಳ್ಳುವಂತಿದೆ. ವ್ಯಕ್ತಿಯೊಬ್ಬರ ತಾಯಿಗೆ ಅಶ್ಲೀಲವಾಗಿ ಬೈಯುವಂತೆ ಸಂದೀಪನನ್ನು ಸುತ್ತುವರೆದ ಗುಂಪು ಒತ್ತಾಯ ಮಾಡುತ್ತಿರುವುದು ವಿಡಿಯೋದಲ್ಲಿದೆ. ಯುವಕರು ಮಾತನಾಡುತ್ತಿರುವ ಭಾಷೆ ಕನ್ನಡ, ಹಿಂದಿ ಮತ್ತು ಮರಾಠಿಯಲ್ಲಿದೆ.

ಮೊದಲ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಸಂದೀಪನನ್ನು ಪತ್ತೆ ಹಚ್ಚಿ ಮಾಹಿತಿ ಪಡೆಯಲು ಪ್ರಯತ್ನಿಸಿದರೂ ಬಾಯಿ ಬಿಟ್ಟಿರಲಿಲ್ಲ. ಈಗ ಬಿಡುಗಡೆಯಾಗಿರುವ ವಿಡಿಯೋ ಆಧರಿಸಿ ಬೆಂಡಿಗೇರಿ ಠಾಣೆ ಪೊಲೀಸರು ಏನು ಕ್ರಮ ಜರುಗಿಸುವರು ? ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net