

ಹುಬ್ಬಳ್ಳಿ: ಸಾಯಿನಗರ ಅಚ್ಚವ್ವನ ಕಾಲನಿಯ ಈಶ್ವರ ದೇವಸ್ಥಾನದ ಬಳಿ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮೃತರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಇಲ್ಲಿಯ ವಿದ್ಯಾನಗರ ಕಟ್ಟಿಮನಿ ಶಾಲೆಯ ವಿದ್ಯಾರ್ಥಿ ಉಣಕಲ್ಲ ಸುಭಾನಿ ನಗರದ ರಾಜು ಕೃಷ್ಣ ಹರ್ಲಾಪುರ (21) ಶುಕ್ರವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಇನ್ನೊಬ್ಬ ಮಾಲಾಧಾರಿ ಲಿಂಗರಾಜ ಬೀರನೂರ ಸಂಜೆ 4 ಗಂಟೆ ವೇಳೆಗೆ ಸಾವಿಗೀಡಾಗಿದ್ದಾರೆ.
ಅಚ್ಚವ್ವನ ಕಾಲನಿಯ ಈಶ್ವರ ದೇವಸ್ಥಾನ ಬಳಿಯ ಕಟ್ಟಡದ ಮೇಲಂತಸ್ತಿನಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ತಂಗಿದ್ದರು. ಭಾನುವಾರ ರಾತ್ರಿ ಅಯ್ಯಪ್ಪಸ್ವಾಮಿಗೆ ಪೂಜೆ ಸಲ್ಲಿಸಿ ಸನ್ನಿಧಾನ ಬಳಿ ಮಲಗಿದ್ದಾಗ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸಂಭವಿಸಿದ ಬೆಂಕಿ ಅವಡದಲ್ಲಿ ಬಾಲಕ ಸೇರಿ 9 ಮಾಲಾಧಾರಿಗಳು ಸುಟ್ಟು ಗಾಯಗೊಂಡಿದ್ದರು.
ಕೆಎಂಸಿಆರ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರಲ್ಲಿ ಗುರುವಾರ ಬೆಳಗಿನಜಾವ ನಿಜಲಿಂಗಪ್ಪ ಬೇಪುರಿ ( 58) ಹಾಗೂ ಸಂಜಯ ಸವದತ್ತಿ (18) ಮೃತಪಟ್ಟಿದ್ದರು. ಶುಕ್ರವಾರ ರಾಜು ಹಾಗೂ ಲಿಂಗರಾಜ ಅವರು ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ.
ಘಟನೆಯಲ್ಲಿ ಓರ್ವ ಬಾಲಕ ಗಾಯಗೊಂಡಿದ್ದು, ಆತನಿಗೆ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ನಾಲ್ವರ ಸ್ಥಿತಿಯು ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆ ಬಳಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಹೆಚ್ಚಿನ ಪರಿಹಾರದ ಭರವಸೆ:
ರಾಜು ಹರ್ಲಾಪುರ ಸಾವಿನ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಬೆಳಗ್ಗೆ ಕಿಮ್ಸ್ ಗೆ ಭೇಟಿ ನೀಡಿದರು. ಕುಟುಂಬದವರಿಗೆ ಸಾಂತ್ವನ ಹೇಳಿದರು.
ಚಿಕ್ಕ ವಯಸ್ಸಿನ ಯುವಕನನ್ನು ಕಳೆದುಕೊಂಡಿದ್ದೇವೆ. ನುರಿತ ವೈದ್ಯರು ಚಿಕಿತ್ಸೆ ನೀಡಿದ್ದರು. ಅಯ್ಯಪ್ಪ ಮಾಲಾಧಾರಿಗಳನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಎಲ್ಲರ ಹಾರೈಕೆ ಲಿಸಲಿಲ್ಲ ಎಂದು ನೋವು ತೋಡಿಕೊಂಡರು.
ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಹೆಚ್ಚಿನ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಲಾಡ್ ಪ್ರತಿಕ್ರಿಯಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಅವರು ಕೂಡ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮನೆಯ ಮಗನನ್ನು ಕಳೆದುಕೊಂಡ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಘಟನೆಯಲ್ಲಿ ಮೃತರೆಲ್ಲರೂ ಬಡ ಕುಟುಂಬದವರು. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅವರ ಕುಟುಂಬಗಳಿಗೆ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.