ಮುಡಾದಲ್ಲಿ ಮತ್ತೊಂದು ಹಗರಣ ಬೆಳಕಿಗೆ

muda
Published on

ಮೈಸೂರು: ಬದಲಿ ನಿವೇಶನ ಹಂಚಿಕೆ ಹಗರಣದ ಬೆನ್ನಲ್ಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.
ಮುಡಾ ಮಂಜೂರು ಮಾಡಿರುವ ನಿವೇಶನಗಳಿಗೂ, ಅಧಿಕಾರಿಗಳು ಸರ್ಕಾರಕ್ಕೆ ನೀಡಿದ ಅಂಕಿ-ಅಂಶಕ್ಕೂ ತಾಳೆಯಾಗುತ್ತಿಲ್ಲ. ಇದು ಮುಡಾ ಹಗರಣದ ಹೊಸ ರೂಪವನ್ನು ಬಯಲು ಮಾಡಿದೆ.
ನಾಲ್ಕು ವರ್ಷದಲ್ಲಿ 4,829 ನಿವೇಶನ ಮಂಜೂರಾತಿ ಪತ್ರಗಳನ್ನು ನೀಡಲಾಗಿದೆ. ಆದರೆ, ಅಧಿಕಾರಿಗಳು ನೀಡಿರುವ ನಿವೇಶನಗಳ ನೋಂದಣಿ ಲೆಕ್ಕದ ಸಂಖ್ಯೆ 1200 ದಾಟುತ್ತಿಲ್ಲ.
2021ರ ಏಪ್ರಿಲ್‌ನಿಂದ 2024ರ ಜುಲೈ 3ರವರೆಗೆ ಮುಡಾದಲ್ಲಿ ಮಂಜೂರಾತಿ ಪತ್ರ ನೀಡಲು ಬಳಕೆ ಆಗಿರುವ ಸೆಕ್ಯೂರಿಟಿ ಬಾಂಡ್ ಶೀಟ್ ದಾಖಲೆ ಲಭ್ಯವಾಗಿದೆ. ಕೇವಲ 54 ದಿನಗಳಲ್ಲಿ ಅಂದರೆ, 2024ರ ಮೇ 9ರಿಂದ ಜುಲೈ 3ರವರೆಗೆ 1200 ಮಂಜೂರಾತಿ ಪತ್ರಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.
ಮುಡಾದಲ್ಲಿ ನಿವೇಶನ ಹಂಚಿಕೆಗೂ ಮುನ್ನ ಅಧಿಕೃತವಾಗಿ ಮಂಜೂರಾತಿ ಪತ್ರವನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ. ಅದಕ್ಕೆಂದೇ ಬಾರ್‌ಕೋಡ್ ಇರುವ ವಿಶಿಷ್ಟ ಬಾಂಡ್ ಶೀಟ್ ಬಳಸಲಾಗುತ್ತದೆ. ಪತ್ರಗಳನ್ನು ಮುದ್ರಿಸಿದ ಬಳಿಕ ಇಂಜಿನಿಯರ್ ದರ್ಜೆಯ ಅಧಿಕಾರಿಯ ವಶಕ್ಕೆ ನೀಡಲಾಗುತ್ತದೆ. ಅವುಗಳನ್ನು ಬಳಸುವ ಮುನ್ನ ರಿಜಿಸ್ಟರ್‌ನಲ್ಲಿ ಪ್ರತಿ ಪತ್ರದ ವಿವರಗಳನ್ನು ನಮೂದಿಸಬೇಕು. ನಿವೇಶನ ಮಂಜೂರಾತಿ ಆದೇಶವನ್ನು ಮುದ್ರಿಸಿದ ಬಳಿಕ, ಯಾರಿಗೆ, ಯಾವ ನಿವೇಶನ ಮಂಜೂರಾಗಿದೆ ಎಂಬ ಮಾಹಿತಿ ನೀಡಬೇಕು. ಅಧಿಕಾರಿಗಳು ಮಾಹಿತಿಯನ್ನು ಮರೆಮಾಚಿ ಪತ್ರಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
ಮುಡಾ ಆಯುಕ್ತರಿಗೆ ಮಾತ್ರ ಪತ್ರ ಬಳಸುವ ಅಥವಾ ಬಳಸಲು ಅನುಮತಿ ನೀಡುವ ಅಧಿಕಾರವಿದೆ. ಒಪ್ಪಿಗೆ ಪಡೆದು ಕಾರ್ಯದರ್ಶಿಗಳು ಬಳಸಬಹುದು. ಆದರೆ, ನಿಯಮ ಮೀರಿ ಕ್ಲರ್ಕ್ ದರ್ಜೆಯ ಸಿಬ್ಬಂದಿಗೂ ಪತ್ರ ಸಿಕ್ಕಿದೆ ಎಂದು ಅಧಿಕಾರಿಯೊಬ್ಬರು ದೂರುತ್ತಾರೆ.
ಇಂತಹ ಪತ್ರಗಳನ್ನು ಬಳಸಿ ಅನಧಿಕೃತವಾಗಿ ನಿವೇಶನಗಳನ್ನು ಮಂಜೂರು ಮಾಡಿ, ಅನ್ಯರ ಹೆಸರಿಗೆ ನೋಂದಣಿ ಮಾಡಿಕೊಟ್ಟಿರುವ ಸಾಧ್ಯತೆ ಹೆಚ್ಚಿದೆ. ಅದನ್ನೇ ಮುಂದಿಟ್ಟುಕೊಂಡು ಹಣಕ್ಕೆ ಒತ್ತಾಯಿಸಲಾಗಿದೆ. ಹೀಗಾಗಿ ಇಡೀ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಹಿಂದಿನ ಆಯುಕ್ತರು, ಕಾರ್ಯದರ್ಶಿ, ವಿಶೇಷ ತಹಸೀಲ್ದಾರ್, ಆಯುಕ್ತರ ಆಪ್ತ ಸಹಾಯಕರನ್ನು ವಿಚಾರಣೆಗೆ ಒಳಪಡಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net