

ನರೇಂದ್ರ ಎಸ್ ಮರಸಣಿಗೆ
ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿಯ ಕಬ್ಬಿನಾಲೆ ಮತ್ತಾವಿನ ಸೇತುವೆ ಕನಸಿಗೆ 4 ದಶಕಗಳೇ ಸಂದಿದೆ. ಆದರೆ ಸೇತುವೆ ಭಾಗ್ಯ ಇನ್ನೂ ದೊರೆತಿಲ್ಲ. ಸೇತುವೆ ನಿರ್ಮಾಣಕ್ಕೆ ಬಾಂಬ್ ಸ್ಫೋಟಿಸಿ 20 ವರ್ಷ ಕಳೆದರೂ ಸೇತುವೆ ನಿರ್ಮಾಣ ಆಗಿಲ್ಲ.
ಮತ್ತಾವು ಪ್ರದೇಶದಲ್ಲಿ ಮಲೆಕುಡಿಯ ಸಮುದಾಯದ 11ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಮಳೆಗಾಲದಲ್ಲಿ ಇಲ್ಲಿಗೆ ಹೋಗಲು ಸಾಧ್ಯವೇ ಇಲ್ಲ. ಹೊಳೆ ತುಂಬಿ ಹರಿಯುವುದರಿಂದ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗುತ್ತದೆ. ಇಲ್ಲಿಗೆ ಹೋಗಲು ಗ್ರಾಮಸ್ಥರೇ ಒಂದು ತಾತ್ಕಾಲಿಕ ಮರದ ಸೇತುವೆ ನಿರ್ಮಿಸಿದ್ದಾರೆ. ಅನಾರೋಗ್ಯ ಕಾಡಿದರೇ ಹೊತ್ತುಕೊಂಡೆ ಬರಬೇಕಾದ ಅನಿವಾರ್ಯತೆ ಇದೆ.
ಇಲ್ಲಿನ ಗ್ರಾಮಸ್ಥರು 4 ದಶಕದಿಂದ ಜನಪ್ರತಿನಿಧಿ, ಅಧಿಕಾರಿಗಳಿಗೆ ಸೇತುವೆ ನಿರ್ಮಿಸಿ ಕೊಡಿ ಎಂದು ಮನವಿ ಮಾಡಿದ್ದರು. ಅದರಂತೆ ಒಮ್ಮೆ ಸೇತುವೆ ನಿರ್ಮಾಣ ಮಂಜೂರು ಮಾಡಲಾಗಿತ್ತು. ಆದರೆ ಅರಣ್ಯ ಇಲಾಖೆಯ ಕಠಿಣ ಕಾನೂನಿನ ತೊಡಕಿನಿಂದಾಗಿ ಮತ್ತಾವಿನಲ್ಲಿ ಸೇತುವೆ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಬಳಿಕ ಚಿಕ್ಕ ಸೇತುವೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದರೂ ಎನ್‌ಎಚ್‌ಎಐ ಇಷ್ಟು ಸಣ್ಣ ಸೇತುವೆ ಮಾಡಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದಾರೆ.
ನಕ್ಸಲ್ ಬಾಂಬ್ ದಾಳಿಗೆ 20 ವರ್ಷ: ಈ ಭಾಗದ ಜನರ ಸಮಸ್ಯೆ ಹಾಗೂ ಬೇಡಿಕೆಯನ್ನು ಈಡೇರಿಸುವಂತೆ ನಕ್ಸಲರು ಹೋರಾಟ ಮಾಡಿ 2005ರ ಜುಲೈ 28ರಂದು ಮತ್ತಾವು ಸಮೀಪದಲ್ಲಿ ಗ್ರೇನೆಡ್ ನೆಲಬಾಂಬ್ ಸ್ಫೋಟಿಸಿದ್ದರು. ಈ ದುರ್ಘಟನೆಯಲ್ಲಿ ಹಲವು ಪೊಲೀಸರು ಗಂಭೀರ ಗಾಯಗೊಂಡಿದ್ದರು. ಈ ಘಟನೆ ನಡೆದು 20 ವರ್ಷ ಕಳೆದರೂ ಮೂಲಸೌಕರ್ಯ ಮರೀಚಿಕೆಯಾಗಿದೆ.
ಕಾನನ ನಡುವಿನ ಬದುಕು ದುಸ್ತರ: ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಸ್ವಾಧೀನತೆಯಲ್ಲಿರುವ ಅರಣ್ಯ ಭೂಮಿಗಾಗಿ ಹಕ್ಕು ಪತ್ರ ನೀಡಿರುತ್ತಾರೆ. ಈ ಹಕ್ಕುಪತ್ರದಲ್ಲಿ ಯಾವುದೇ ಸರ್ಕಾರದ ಸವಲತ್ತುಗಳು ಸಿಗುವುದಿಲ್ಲ. ಇಲ್ಲಿ ಅಡಕೆ ಬೆಳೆಯುವುದರಿಂದ ಬಹುಮುಖ್ಯವಾದ ಕೃಷಿ ಇಲಾಖೆಯ ಪ್ರಯೋಜನದಲ್ಲಿ ಟಾರ್ಪಲ್ ಕೂಡ ಪಡೆಯಲು ಸಾಧ್ಯವಿಲ್ಲ.
ನಮ್ಮ ಪೂರ್ವಜರ ಕಾಲದಿಂದಲೂ ನಾವು ಮತ್ತಾವಿನಲ್ಲಿ ಮಳೆಗಾಲದಲ್ಲಿ ಸಂಪರ್ಕಕ್ಕಾಗಿ ಕೃತಕ ಕಾಲು ಸಂಕ ನಿರ್ಮಿಸುತ್ತ ಕಷ್ಟದಲ್ಲಿ ಬದುಕು ಸಾಗಿಸಿಕೊಂಡು ಬರುತ್ತಿದ್ದೇವು. ಕೆಲವೊಮ್ಮೆ ತೀವ್ರ ಮಳೆಗೆ ಸಂಕ ಕೊಚ್ಚಿ ಹೋಗುತ್ತದೆ. ಈ ವರ್ಷ ಕಾಲುಸಂಕ ಕೊಚ್ಚಿಕೊಂಡು ಹೋಗಬಾರದೆಂದು ಅಲ್ಲಲ್ಲಿ ಮರಕ್ಕೆ ತಂತಿ ಅಳವಡಿಸಿ ಕಟ್ಟಿದ್ದೇವೆ ಎನ್ನುತ್ತಾರೆ ಮತ್ತಾವಿನ ಮಂದಿ.
ಮತ್ತಾವು ಸೇತುವೆ ನಮ್ಮ ಸಮುದಾಯದ ಬಹುಕಾಲದ ಬೇಡಿಕೆ. ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಕಿಲೋಮೀಟರ್ ನಡೆಯಬೇಕು. ಸಂಬಂಧ ಕುದುರಿಸುವಾಗ ಸೇತುವೆಯ ನೆಪ ಹೇಳಿ ತಪ್ಪಿಸಿಕೊಳ್ಳುತ್ತಾರೆ. ಕೆಲವು ಮನೆಯಲ್ಲಿ ಬೈಕ್‌ಗಳಿದ್ದು ಪಾಕಿರ್ಂಗ್ ಸಮಸ್ಯೆ ಎದುರಾಗಿದೆ. ಪ್ರತಿ ವರ್ಷ ಕೇಳಿದಾಗ ಬರುವ ವರ್ಷ ಆಗುತ್ತದೆ ಎಂದು ಹೇಳಿ ದಶಕಗಳೇ ಕಳೆದಿವೆ.ಗೀತಾ ಮತ್ತಾವು, ಸ್ಥಳೀಯರು.ಮತ್ತಾವು ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಸಮಸ್ಯೆ ಇದೆ. ಅನುಮತಿ ಸಿಕ್ಕಿದ ಕೂಡಲೇ ಇದನ್ನು ವಿಶೇಷವಾಗಿ ಪರಿಗಣಿಸಿ ಸೇತುವೆ ನಿರ್ಮಾಣದ ಕೆಲಸ ಮಾಡುತ್ತೇನೆ. ಸುನಿಲ್ ಕುಮಾರ್, ಶಾಸಕರು, ಕಾರ್ಕಳ.ಮೇಲಧಿಕಾರಿಗಳ ನಿರ್ದೇಶನದಲ್ಲಿ ಅರಣ್ಯ ಇಲಾಖೆಯಿಂದ ನಡೆಸುವಂತ ಪ್ರಕ್ರಿಯೆಗಳು ಎಲ್ಲವೂ ಮುಗಿದಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸ್ಟೇಟ್ ಬೋರ್ಡ್ ಫಾರ್ ವೈಲ್ಡ್‌ಲೈಫ್ ಮಂಡಳಿ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ನ್ಯಾಷನಲ್ ಬೋರ್ಡ್ ಫಾರ್ ವೈಲ್ಡ್‌ಲೈಫ್‌ನಿಂದ ಕೆಲವೊಂದು ಪ್ರಶ್ನೆಗಳು ಕೇಳಿದ್ದು, ಇದರ ನಿರ್ಮಾಣದ ಜವಾಬ್ದಾರಿ ಹೊತ್ತ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಇನ್ನೂ ಉತ್ತರ ನೀಡಿಲ್ಲ.ಶಿವರಾಮಬಾಬು, ಡಿಸಿಎಫ್ ಕುದುರೆಮುಖ ವನ್ಯಜೀವಿ ವಿಭಾಗ.ನಮ್ಮ ಸಮುದಾಯದವರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಆರೋಗ್ಯ ಹದಗೆಟ್ಟರೆ ಜೋಳಿಗೆ ಗತಿ, ಆರು ತಿಂಗಳು ಮತ್ತಾವಿಗೆ ಸಂಪರ್ಕ ಕಷ್ಟ. ಮೂಲಸೌಲಭ್ಯದ ಮರೀಚಿಕೆಯಿಂದಾಗಿ ಅರೋಗ್ಯ, ಶಿಕ್ಷಣ, ಸಂಬಂಧ ಕುದುರಿಸಲು, ಉದ್ಯೋಗಕ್ಕೆ ಕಷ್ಟವಾಗಿದೆ. 11 ಕುಟುಂಬದ 40ಕ್ಕೂ ಹೆಚ್ಚು ಮಂದಿ ಕಷ್ಟದಾಯಕ ಜೀವನ ನಡೆಸುತ್ತಿದ್ದಾರೆ.ಗಂಗಾಧರ ಗೌಡ, ಅಧ್ಯಕ್ಷರು, ಜಿಲ್ಲಾ ಮಲೆಕುಡಿಯ ಸಂಘ ಉಡುಪಿ.