ಕೆ.ಆರ್.ನಗರದಲ್ಲಿ ಶೀಘ್ರ ಮತ್ತೊಂದು ‘ನಮ್ಮ ಕ್ಲಿನಿಕ್’

ಕೆ.ಆರ್.ನಗರದ ಆಂಜನೇಯ ಬಡಾವಣೆಯಲ್ಲಿ ಪ್ರಾರಂಭವಾಗಲಿರುವ ನಮ್ಮ ಕ್ಲೀನಿಕ್ ಕಟ್ಟಡದ ಹೊರನೋಟ.
ಕೆ.ಆರ್.ನಗರದ ಆಂಜನೇಯ ಬಡಾವಣೆಯಲ್ಲಿ ಪ್ರಾರಂಭವಾಗಲಿರುವ ನಮ್ಮ ಕ್ಲೀನಿಕ್ ಕಟ್ಟಡದ ಹೊರನೋಟ.
Published on

ಕೆ.ಆರ್.ನಗರ: ಬಡಜನರ ಆರೋಗ್ಯದ ದೃಷ್ಟಿಯಿಂದ ಹಾಗೂ ಖಾಸಗಿ ಕ್ಲಿನಿಕ್‌ಗಳಂತೆ ಸ್ಥಳೀಯವಾಗಿಯೇ ಸರ್ಕಾರದಿಂದ ಉತ್ತಮ ಚಿಕಿತ್ಸೆ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ಸ್ಥಾಪಿಸಿರುವ ನಮ್ಮ ಕ್ಲಿನಿಕ್‌ಗೆ ಬೇಡಿಕೆ ಹೆಚ್ಚಾಗಿದ್ದು, ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ಮತ್ತೊಂದು ನಮ್ಮ ಕ್ಲಿನಿಕ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಖಾಸಗಿ ಕ್ಲಿನಿಕ್‌ಗಳಲ್ಲಿ ದೊರಕುವ ಚಿಕಿತ್ಸೆ ರೀತಿಯಲ್ಲೇ ಸೂಕ್ತ ಮತ್ತು ಶೀಘ್ರ ಚಿಕಿತ್ಸೆ ಲಭ್ಯವಾಗಲಿ ಎಂಬ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 3 ವರ್ಷಗಳ ಹಿಂದೆ ಪಟ್ಟಣದ ಈಶ್ವರನಗರದ ಲಾಲನಹಳ್ಳಿ ರಸ್ತೆ ಮಾರ್ಗದಲ್ಲಿ ಪ್ರಾರಂಭಿಸಲಾದ ನಮ್ಮ ಕ್ಲಿನಿಕ್ ಉತ್ತಮವಾಗಿ ಕೆಲಸ ನಿರ್ವಹಿಸುವ ಮೂಲಕ ಜನಮನ್ನಣೆ ಗಳಿಸಿದ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಮತ್ತೊಂದು ಕ್ಲಿನಿಕ್ ಬೇಕೆಂಬ ಒತ್ತಾಯದ ಮೇರೆಗೆ ಮಂಜೂರಾತಿ ದೊರೆತಿದೆ.

ಈ ನಡುವೆ ನಮ್ಮ ಕ್ಲಿನಿಕ್ ಬಾಡಿಗೆ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದೆ. ಈಗ ಪ್ರಾರಂಭಿಸಲು ಉದ್ದೇಶಿಸಿರುವ ಕ್ಲಿನಿಕ್ ಕಟ್ಟಡ ಪುರಸಭೆಗೆ ಸೇರಿರುವ ಹಿನ್ನೆಲೆಯಲ್ಲಿ ಬಾಡಿಗೆ ಹಣ ಪುರಸಭೆಗೆ ಬರಲಿದೆ. ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ಪುರಸಭೆ ವತಿಯಿಂದ 10-15 ವರ್ಷಗಳ ಹಿಂದೆ ನಿರ್ಮಿಸಿ ಇದೀಗ ಪಾಳು ಬಿದ್ದಿದ್ದ ಮಾಂಸ ಮಾರುಕಟ್ಟೆ ವಾಣಿಜ್ಯ ಸಂಕೀರ್ಣದಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭಿಸಲು ಉದ್ದೇಶಿಸಲಾಗಿದ್ದು ಕಟ್ಟಡದ ನವೀಕರಣ ಹಾಗೂ ಸುಣ್ಣ-ಬಣ್ಣ ಬಳಿಯುವ ಕಾರ್ಯ ಭರದಿಂದ ಸಾಗಿದೆ.

ಪಟ್ಟಣದಲ್ಲಿ 40 ಸಾವಿರಕ್ಕೂ ಹೆಚ್ಚು ಅಧಿಕ ಜನಸಂಖ್ಯೆ ಇದ್ದು, ಈಗ ಇರುವ ನಮ್ಮ ಕ್ಲಿನಿಕ್ ಪಟ್ಟಣದ ಹೊರವಲಯಕ್ಕೆ ಸೇರಿಕೊಂಡಂತಿರುವುದರಿಂದ ಆ ಭಾಗದ ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೂ ಅದರ ಅನುಕೂಲವಾಗುತ್ತಿದೆ. ಅಲ್ಲದೆ ಕೇಂದ್ರ ಸ್ಥಾನದಲ್ಲಿ ಸಾರ್ವಜನಿಕ ಆಸ್ಪತ್ರೆ ಇದ್ದು ಎಲ್ಲರಿಗೂ ಅನುಕೂಲವಾಗುತ್ತಿದೆಯಾದರೂ ಸಣ್ಣಪುಟ್ಟ ಕಾಯಿಲೆಗಳಿಗೂ ದೊಡ್ಡಾಸ್ಪತ್ರೆ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಪರಿಣಾಮ ಸಣ್ಣಪುಟ್ಟ ಜ್ವರ, ನೆಗಡಿ, ತಲೆನೋವು, ಶೀತ, ಕೆಮ್ಮು, ಬಿಪಿ, ಶುಗರ್ ಪರೀಕ್ಷೆ ಹಾಗೂ ಗುಳಿಗೆಗಳನ್ನು ಪಡೆಯಲು ನಮ್ಮ ಕ್ಲಿನಿಕ್‌ನ ಅಗತ್ಯ ಹೆಚ್ಚಾಗಿದೆ.

ಕಳೆದ ಏಳೆಂಟು ತಿಂಗಳುಗಳ ಹಿಂದೆ ಪಟ್ಟಣದ ಈಶ್ವರನಗರದ ಲಾಲನಹಳ್ಳಿ ರಸ್ತೆ ಪಕ್ಕದಲ್ಲೇ ಇರುವ ಖಾಸಗಿ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿರುವ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯ, ನರ್ಸ್, ಲ್ಯಾಬ್ ಟೆಕ್ನಿಷಿಯನ್ ಹಾಗೂ ಡಿ ಗ್ರೂಪ್ ಸಿಬ್ಬಂದಿ ಸೇರಿದಂತೆ ನಾಲ್ವರು ನಿತ್ಯ ಕೆಲಸ ನಿರ್ವಹಿಸುತ್ತಿದ್ದಾರೆ. ಭಾನುವಾರ ಮತ್ತು ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1.30 ಹಾಗೂ ಮಧ್ಯಾಹ್ನ 2 ರಿಂದ 4.30 ರವರಗೆ ಕ್ಲಿನಿಕ್‌ನಲ್ಲಿ ಸೇವೆ ಲಭ್ಯವಿದೆ. ಆದರೆ ಸಂಜೆ ವೇಳೆಯೂ ಆಸ್ಪತ್ರೆ ತೆರೆದು ಇನ್ನೂ ಹೆಚ್ಚು ಸೌಲಭ್ಯ ಸಿಗುವುದರ ಜತೆಗೆ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಅರ್ಧ ದಿನ ಅಥವಾ ಒಂದು ದಿನದ ಮಟ್ಟಿಗಾದರೂ ಒಳರೋಗಿಯಾಗಿ ದಾಖಲು ಮಾಡಿಕೊಳ್ಳುವಂತಹ ವ್ಯವಸ್ಥೆಯಾದರೆ ಅನುಕೂಲ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಯಾರಿಗೆ ಅನುಕೂಲ: ಈ ಕ್ಲಿನಿಕ್ ಹಿರಿಯ ನಾಗರಿಕರು, ಮಕ್ಕಳಿಗೆ, ಸಾಮಾನ್ಯ ಕಾಯಿಲೆಗಳಾದ ಜ್ವರ, ಶೀತ, ನೆಗಡಿ, ಕೆಮ್ಮು, ರಕ್ತದೊತ್ತಡ ಪರೀಕ್ಷೆ, ಮಧುಮೇಹಿಗಳು ಹಾಗೂ ಗರ್ಭಿಣಿಯರಿಗೆ ಹೆಚ್ಚಿನ ಅನುಕೂಲವಾಗಿದೆ. ಇಲ್ಲಿಗೆ ಬರುವ ರೋಗಿಗಳಿಗೆ ವಿಳಂಬವಿಲ್ಲದೆ ಶೀಘ್ರವಾಗಿ ಚಿಕಿತ್ಸೆ ಸಿಗಲಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಉತ್ತಮ ವಾತವರಣ, ವೈದ್ಯರ ಸ್ಪಂದನೆ, ಸಿಬ್ಬಂದಿ ಸಹಕಾರದಿಂದ ದಿನದಿಂದ ದಿನಕ್ಕೆ ಕ್ಲಿನಿಕ್ ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಇದರೊಂದಿಗೆ ಯೋಗ ತರಗತಿ, ರಕ್ತದಾನ ಶಿಬಿರ, ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಶಿಬಿರಗಳನ್ನು ಮಾಡಿ ಆರೋಗ್ಯ ಮತ್ತು ಶುಚಿತ್ವದ ಅರಿವು ಮೂಡಿಸಿದರೆ ಮತ್ತಷ್ಟು ಅನುಕೂಲವಾಗಲಿದೆ.

ಈ ಕ್ಲಿನಿಕ್‌ಗಳು ಜನರಿಗೆ ಉತ್ತಮ ಸೇವೆ ನೀಡುತ್ತವೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಅದಕ್ಕೆ ಮತ್ತಷ್ಟು ಅಗತ್ಯ ಪರಿಕರಗಳಾದ ಕಾಟ್, ಬೆಡ್, ಅಂಗವಿಕಲರು ಮತ್ತು ವೃದ್ಧರಿಗಾಗಿ ವ್ಹೀಲ್ ಚೇರ್, ಬಿಪಿ ಮತ್ತು ಶುಗರ್ ಮಾತ್ರೆಗಳ ಕೊರತೆ ಎದುರಾಗದಂತೆ ನಿರ್ವಹಿಸಿ ಆದಷ್ಟೂ ಬೇಗ ಪ್ರಾರಂಭವಾಗಿ ಸಾರ್ವಜನಿಕರಿಗೆ ಲಭ್ಯವಾಗಲಿ ಎಂಬುದೇ ಎಲ್ಲರ ಆಶಯ.

ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ನಮ್ಮ ಶಾಸಕರು ಕೆಆರ್ ನಗರ ಪಟ್ಟಣಕ್ಕೆ ಮತ್ತೊಂದು ನಮ್ಮ ಕ್ಲಿನಿಕ್ ಕೊಡಿಸಿದ್ದಾರೆ. ಈಗಾಗಲೇ ಕ್ಲಿನಿಕ್‌ಗೆ ಅಗತ್ಯ ಪರಿಕರಗಳು ಬಂದಿವೆ. ನಮಗೆ ಕಟ್ಟಡ ಹಸ್ತಾಂತರವಾದ ತಕ್ಷಣ ಕ್ಲಿನಿಕ್ ಪ್ರಾರಂಭಿಸಲಾಗುವುದು. ಡಾಕ್ಟರ್, ಟೆಕ್ನಿಷಿಯನ್, ಸ್ಟಾಫ್ ನರ್ಸ್, ಹೆಲ್ತ್ ಇನ್‌ಸ್ಪೆಕ್ಟರ್, ಗ್ರೂಪ್ ಡಿ ಸೇರಿದಂತೆ ಐವರು ಕ್ಲಿನಿಕ್‌ನಲ್ಲಿ ಕಾಯ ನಿರ್ರ್ವಹಿಸಲಿದ್ದಾರೆ. 15,000 ಜನಸಂಖ್ಯೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ಲಿನಿಕ್ ತೆರೆಯಲಾಗುತ್ತಿದ್ದು, ಇದರಿಂದ ಸಾರ್ವಜನಿಕ ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆಯಾಗಲಿದೆ. ಸ್ಥಳೀಯವಾಗಿ ಗರ್ಭಿಣಿಯರು, ಮಕ್ಕಳ ಸಣ್ಣಪುಟ್ಟ ಕಾಯಿಲೆಗಳಿಗೆ ಶೀಘ್ರವಾಗಿ ಸ್ಥಳೀಯವಾಗಿ ಚಿಕಿತ್ಸೆ ಸಿಗಲಿದೆ.

ನಟರಾಜ್ ತಾಲೂಕು ಆರೋಗ್ಯಾಧಿಕಾರಿ

ನಮ್ಮ ಪಟ್ಟಣಕ್ಕೆ ಶಾಸಕರ ವಿಶೇಷ ಕಾಳಜಿಯಿಂದ ಮತ್ತೊಂದು ನಮ್ಮ ಕ್ಲಿನಿಕ್ ಬಂದಿದೆ. ಇದರಿಂದ ನಮ್ಮ ಪಟ್ಟಣದ 5, 6, 7, 8, 9, 10, 11, 12ನೇ ವಾರ್ಡ್‌ನ ಸುಮಾರು 20 ಸಾವಿರ ಜನರಿಗೆ ಅನುಕೂಲ ವಾಗ ಲಿದೆ. ಶಾಸಕರ ಸೂಚನೆ ಮೇರೆಗೆ 29ರಂದು ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರ ಉಪಸ್ಥಿತಿಯಲ್ಲಿ ಕ್ಲಿನಿಕ್ ಉದ್ಘಾಟನೆ ಆಗಲಿದ್ದು, ಸಾರ್ವಜನಿಕ ಸೇವೆಗೆ ಅನುಕೂಲವಾಗಲಿದೆ.

ಶಿವುನಾಯಕ್

ಪುರಸಭಾ ಅಧ್ಯಕ್ಷ, ಕೆ.ಆರ್.ನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net