

ರಿಪ್ಪನ್‌ಪೇಟೆ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಳೆದ ನಲವತ್ತು ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳನ್ನು ಕೆಲವೇ ವರ್ಷಗಳಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾಡಿದ್ದಾರೆ. ಪರಿಣಾಮ ರಾಜ್ಯದಲ್ಲಿಯೇ ಅತ್ಯುತ್ತಮ ಸಂಸದ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಅಭಿವೃದ್ಧಿಗೆ ಇನ್ನೊಂದು ಹೆಸರು ಬಿ.ವೈ.ರಾಘವೇಂದ್ರ ಎನ್ನುವಷ್ಟು ಮನೆಮಾತಾಗಿದ್ದಾರೆ ಎಂದು ಬಿಜೆಪಿಯ ಆರ್.ಟಿ. ಗೋಪಾಲ್, ಜೆಡಿಎಸ್‌ನ ಆರ್.ಎ. ಚಾಬುಸಾಬ್ ಹೇಳಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಸಂಸದ ಬಿ.ವೈ.ರಾಘವೇಂದ್ರ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಜತೆಗೆ ಮಲೆನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಿ ಕಾರ್ಯ ಪ್ರವೃತ್ತರಾಗಿದ್ದಾರೆ. ಪಾರಂಪರಿಕ ಅರಣ್ಯ ವಾಸಿಗಳಿಗೆ ಹಕ್ಕುಪತ್ರ ನೀಡಲು ವಿಧಿಸಲಾಗಿದ್ದ ನಿಯಮವನ್ನು 75 ವರ್ಷಗಳಿಂದ 25 ವರ್ಷಕ್ಕೆ ಇಳಿಸುವಂತೆ ಸದನದ ಗಮನವನ್ನು ಸೆಳೆದಿದ್ದಾರೆ. ರಸ್ತೆ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಹಾಗು ಜೋಗ ಮತ್ತು ಕೊಡಚಾದ್ರಿಗಳನ್ನು ಸಮಗ್ರ ಅಭಿವೃದ್ಧಿಗೊಳಿಸುತ್ತಿದ್ದಾರೆ ಎಂದರು.
ಎಲ್ಲ ಧರ್ಮದವರಿಗೂ ಅನುದಾನ ನೀಡಿದ್ದು, ಸಮುದಾಯ ಭವನಗಳು ಹಾಗೂ ಮಠಗಳ ನಿರ್ಮಾಣಕ್ಕೆ ಸಹಕರಿಸಿದ್ದಾರೆ. ಇಷ್ಟೊಂದು ಅಭಿವೃದ್ಧಿ ಕೈಗೊಂಡಿರುವ ಸಂಸದರು ಕ್ಷೇತ್ರಕ್ಕೆ ಅತಿಅಗತ್ಯವಾಗಿದ್ದು ಮತ್ತೊಮ್ಮೆ ಅವರನ್ನು ಗೆಲ್ಲಿಸಬೇಕಿದೆ ಎಂದು ಹೇಳಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಹತ್ತಾರು ಈಶ್ವರಪ್ಪ ಬಂದರೂ ರಾಘವೇಂದ್ರ ಅವರನ್ನು ಸೋಲಿಸಲು ಸಾಧ್ಯವಿಲ್ಲ. ಇನ್ನೊಬ್ಬ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್ 10 ವರ್ಷ ಹಿಂದೆ ಹೋದವರು ಇದೀಗ ಮತ್ತೆ ಬಂದಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ವಂಚಿಸುತ್ತಿದೆ ಎಂದು ದೂರಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎನ್.ವರ್ತೇಶ್, ಮುಖಂಡರಾದ ಜಿ.ಎಸ್.ವರದರಾಜ್, ಎಂ.ಬಿ.ಮಂಜುನಾಥ, ಸುಂದರೇಶ, ಸುಧೀಂದ್ರ ಪೂಜಾರಿ, ಪಿ.ರಮೇಶ, ಕೃಷ್ಣೋಜಿ, ನಾಗಾರ್ಜುನ ಸ್ವಾಮಿ ಇತರರಿದ್ದರು.