ಕಾರಗುಳಿ ಬಳಿ ಮತ್ತೆ ಗುಡ್ಡ ಕುಸಿತ

SDP GIDDA KUSITA
Published on

ಸಿದ್ದಾಪುರ: ಗಾಳಿ-ಮಳೆಯಿಂದಾಗಿ ತಾಲೂಕಿನ ಗೊಳಿಮಕ್ಕಿ -ಹೇರೂರು ಶಿರಸಿ ರಸ್ತೆಯ ಕಾರಗುಳಿಯಲ್ಲಿ ಗುಡ್ಡಕುಸಿದು ರಸ್ತೆಯ ಮೇಲೆ ಭಾರೀ ಗಾತ್ರದ ಕಲ್ಲಿನ ಬಂಡೆ ಬಂದು ಬಿದ್ದು ಸಂಚಾರ ಸ್ಥಗಿತಗೊಂಡಿತ್ತು.

ಕುಸಿದ ಗುಡ್ಡದ ಮಣ್ಣನ್ನು ಹಾಗೂ ರಸ್ತೆಯ ನಡುವೆ ಬಿದ್ದ ಭಾರೀ ಗಾತ್ರದ ಕಲ್ಲಿನ ಬಂಡೆಯನ್ನು ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಸಂಚಾರ ಸ್ಥಗಿತಗೊಂಡಿದ್ದರಿಂದ ಶಿರಸಿ ಹಾಗೂ ಸಿದ್ದಾಪುರಕ್ಕೆ ತೆರಳುವವರು ಹಾಗೂ ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಯಿತು.

ಅದರಂತೆ ತಾಲೂಕಿನ ಹಲವು ಗ್ರಾಮೀಣ ರಸ್ತೆಗಳಲ್ಲಿ ರಸ್ತೆಗೆ ಅಡ್ಡವಾಗಿ ಮರಗಳು ಬಿದ್ದಿದ್ದಲ್ಲದೆ, ಧರೆ ಕುಸಿದು ಸಂಚಾರಕ್ಕೆ ಅಡಚಣೆ ಉಂಟಾಗಿರುವುದನ್ನು ಸ್ಥಳೀಯರು ಹಾಗೂ ರಸ್ತೆ ನಿರ್ವಹಣೆ ಮಾಡುತ್ತಿರುವ ಇಲಾಖೆ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಶಿಕಾಂತ ಗೌಡ ಭೇಟಿ ಪರಿಶಿಲಿಸಿದರು.

ಮತ್ತಷ್ಟು ಕುಸಿಯುವ ಸಾಧ್ಯತೆ:

ಕಾರಗುಡಿ ಸಮೀಪ ಕಳೆದ ಮಳೆಗಾಲದಲ್ಲಿಯೂ ಗುಡ್ಡ ಕುಸಿದು ಸಂಚಾರಕ್ಕೆ ಅಸ್ತವ್ಯಸ್ತವಾಗಿತ್ತು. ಅಲ್ಲದೆ, ರಸ್ತೆಯ ಪಕ್ಕವೇ ಕಲ್ಲಿನ ಬಂಡೆಯೊಂದು ಬಿದ್ದಿತ್ತು. ಅದನ್ನು ಲೋಕೋಪಯೋಗಿ ಇಲಾಖೆ ತೆರವುಗೊಳಿಸಿದೆ ಸಂಚಾರಕ್ಕೆ ತೊಂದರೆಯಾಗುತ್ತಿರುವ ಕುರಿತು ಮೇ. 12ರಂದು ವಿಜಯವಾಣಿ ‘ಮುಖ್ಯ ರಸ್ತೆ ಮೇಲಿನ ಕಲ್ಲು ಬಂಡೆ ತೆರವಿಗೆ ಒತ್ತಾಯ’ ಎನ್ನುವ ಶೀರ್ಷಿಕೆಯಡಿ ಸಚಿತ್ರವಾಗಿ ಸುದ್ದಿ ಮಾಡಿತ್ತು. ವರದಿಗೆ ಎಚ್ಚೆತ್ತುಗೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅದನ್ನು ತೆರವುಗೊಳಿಸಿತ್ತು. ಪುನಃ ಅದೇ ಸ್ಥಳದಲ್ಲಿ ಗುಡ್ಡ ಕುಸಿದಿದ್ದು ಇನ್ನೂ ಮತ್ತಷ್ಟು ಕುಸಿಯುವ ಸಾಧ್ಯತೆ ಕಂಡುಬರುವುದರಿಂದ ಲೋಕೋಪಯೋಗಿ ಇಲಾಖೆ ಮುಂಜಾಗೃತೆ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net