

ವಿಜಯವಾಣಿ ವಿಶೇಷ ಮೈಸೂರು
ಗಾಂಧಿ ನಡೆದಾಡಿ ಸ್ವಾತಂತ್ರೃ ಹೋರಾಟದ ಜತೆಗೆ ಆಸ್ಪಶ್ಯತೆ ವಿರುದ್ಧ ಜಾಗೃತಿ ಮೂಡಿಸಿದ್ದ ಸಾಂಸ್ಕೃತಿಕ ನಗರಿಯಲ್ಲಿ ಮತ್ತೊಂದು ಗಾಂಧಿ ಭವನ ನಿರ್ಮಾಣಗೊಳ್ಳುತ್ತಿದೆ.
ನಗರದ ಪುರಭವನದ ಆವರಣದಲ್ಲಿ ಸ್ವಾತಂತ್ರೃ ಹೋರಾಟದ ಅರಿವು ಮೂಡಿಸಿದ್ದ ಗಾಂಧೀಜಿ, ಅಶೋಕಪುರಂಗೆ ಭೇಟಿ ನೀಡಿ ಆಸ್ಪಶ್ಯತೆ ವಿರುದ್ಧ ಆತ್ಮವಿಶ್ವಾಸ ತುಂಬಿದ್ದರು. ಅಲ್ಲದೆ, ಮಹಾರಾಜರು ಸ್ಥಾಪಿಸಿದ್ದ ಕೆ.ಆರ್. ಮಿಲ್, ನಂಜನಗೂಡು ತಾಲೂಕು ಬದನವಾಳು ಗ್ರಾಮಕ್ಕೆ ಭೇಟಿ ನೀಡಿ ಖಾದಿ ಕುರಿತು ಜಾಗೃತಿ ಮೂಡಿಸಿದ್ದರು. ನಗರದ ಗಾಂಧಿ ವೃತ್ತದಲ್ಲಿ ಗಾಂಧಿ ಚಿತಾಭಸ್ಮವನ್ನು ಹಾಕಿ ಅದರ ಮೇಲೆ ಗಾಂಧಿ ಪ್ರತಿಮೆ ನಿರ್ಮಿಸುವ ಮೂಲಕ ಅವರ ಸ್ಮರಣೆ ಮಾಡಲಾಗುತ್ತಿದೆ. ಹೀಗಾಗಿ ತಮ್ಮ ಹೆಜ್ಜೆ ಗುರುತುಗಳು ಮೂಡಿಸಿರುವ ಮೈಸೂರಿನಲ್ಲಿ ಗಾಂಧಿಯನ್ನು ಸದಾ ನೆನೆಯಲು ಈಗ ಮತ್ತೊಂದು ಗಾಂಧಿ ಭವನ ನಿರ್ಮಾಣಗೊಳ್ಳುತ್ತಿದೆ. ಈಗಾಗಲೇ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿ ಗಾಂಧಿ ಅಧ್ಯಯನ ಕೇಂದ್ರದಿಂದ ಸಬರಮತಿ ಆಶ್ರಮದ ಮಾದರಿ ಗಾಂಧಿ ಆಶ್ರಮ ನಿರ್ಮಿಸಲಾಗಿದೆ.
ಅರಮನೆ ನಗರಿಗೆ ಹೆಗ್ಗಳಿಕೆ ಎಂಬಂತೆ ಮೈಸೂರಿನಲ್ಲಿ ಶೀಘ್ರದಲ್ಲಿಯೇ ‘ಗಾಂಧಿಭವನ’ ನಿರ್ಮಾಣಗೊಂಡು ತಲೆಎತ್ತಲಿದೆ. ಈ ಮೂಲಕ ನಗರದ ಮುಕುಟಕ್ಕೆ ಮತ್ತೊಂದು ಗರಿ ಸೇರಿದಂತಾಗುತ್ತದೆ. ಮಹಾತ್ಮ ಗಾಂಧಿ ಚಿಂತನೆಗಳು, ತತ್ವ, ಆದರ್ಶ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳೊಂದಿಗೆ, ಅವರ ಸರಳ ಜೀವನ, ಸತ್ಯಾಗ್ರಹ, ಗುಡಿ ಕೈಗಾರಿಕೆಗಳಿಗೆ ನೀಡಿದ ಪ್ರೋತ್ಸಾಹ, ಮಕ್ಕಳು, ಮಹಿಳೆಯರು, ದಲಿತ, ಹಿಂದುಳಿದವರ ಬಗ್ಗೆ ಅವರಿಗಿದ್ದ ಕಾಳಜಿ, ತುಡಿತಗಳ ಅನಾವರಣ ಗಾಂಧಿ ಭವನದಲ್ಲಿ ಆಗಲಿದೆ.
ನಗರದ ಸಿದ್ದಾರ್ಥ ಬಡಾವಣೆಯಲ್ಲಿರುವ ಹೊಸ ಜಿಲ್ಲಾಧಿಕಾರಿ ಕಚೇರಿ ಬಳಿ ಸದ್ದಿಲ್ಲದೆ ನಿರ್ಮಾಣವಾಗುತ್ತಿರುವ ಗಾಂಧಿಭವನದ ಕಾಮಗಾರಿ ಶೇ.70 ಪೂರ್ಣಗೊಂಡು ಇನ್ನು 3-4 ತಿಂಗಳಲ್ಲಿ ಉದ್ಘಾಟನೆಗೆ ಸಿದ್ಧಗೊಳ್ಳಲಿದೆ. ಜಿಲ್ಲೆಯವರೆ ಅದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ತಮ್ಮ ಮೊದಲ ಅವಧಿಯ 2016- 17ನೇ ಆಯವ್ಯಯದಲ್ಲಿ ಗಾಂಧೀಜಿ ವಿಚಾರಧಾರೆಗಳನ್ನು ಪ್ರಚುರಪಡಿಸಲು ಅನುಕೂಲವಾಗುವಂತೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ವಾರ್ತಾ ಇಲಾಖೆ ಮುಖಾಂತರ 3 ಕೋಟಿ ರೂ. ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು.
ಅದರಂತೆ ಮೈಸೂರಿನಲ್ಲಿಯೂ ಈಗ ಒಂದು ಎಕರೆ ವಿಶಾಲ ಪ್ರದೇಶದಲ್ಲಿ ಗಾಂಧಿಭವನ ತಲೆಎತ್ತುತಿದೆ. 100*100 ಅಳತೆಯ ಭವ್ಯ ಕಟ್ಟಡ ನಿರ್ಮಾಣವಾಗುತ್ತಿದೆ. ಅದರಲ್ಲಿ ಗ್ರಂಥಾಲಯ, ವಾಚನಾಲಯ, ವಿವಿಧೋದ್ದೇಶ ಸಭಾಂಗಣ, ತರಬೇತಿ ಕೇಂದ್ರ, ಗಾಂಧಿಯವರ ಜೀವನದ ವಿವಿಧ ಹಂತಗಳ ಫೋಟೋ ಗ್ಯಾಲರಿ, 100 ಜನ ಕುಳಿತುಕೊಳ್ಳಬಹುದಾದ ಸಭಾಂಗಣ, ಸುಂದರ ಆಕೃತಿಗಳ ಒಳಾಂಗಣ, ಕಚೇರಿ ಕೋಣೆ ಸೇರಿದಂತೆ, ಕಟ್ಟಡದ ಹಿಂಭಾಗದಲ್ಲಿ ಶೌಚಗೃಹ, ಅಂಗವಿಕಲರಿಗೆ ರ‌್ಯಾಂಪ್ ವ್ಯವಸ್ಥೆ ಇರಲಿದೆ.ಗಾಂಧಿ ಭವನದಲ್ಲಿ ವರ್ಷಪೂರ್ತಿ ಕಾರ್ಯ ಚಟುವಟಿಕೆಗಳು ಹಾಗೂ ತರಬೇತಿಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಕಾಲ ಕಾಲಕ್ಕೆ ಸಭೆ, ಸಮಾರಂಭಗಳನ್ನು ನಡೆಸಿ ಗಾಂಧೀಜಿಯ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಲಾಗುತ್ತದೆ.
ಗ್ಯಾರಾ ಮೂರ್ತಿ ಆಕೃತಿ
ಕಟ್ಟಡದ ಮುಂಭಾಗದ ಅಂಗಳದಲ್ಲಿ ಹುಲ್ಲುಹಾಸಿನ ನಡುವೆ ಗಾಂಧಿಯವರ ವಿವಿಧ ಕಲಾಕೃತಿಗಳು, ಸ್ವಾತಂತ್ರ್ಯ ಸಂಗ್ರಾಮದ ಫೋಟೋಗಳು, ದೆಹಲಿಯ ಪಾರ್ಲಿಮೆಂಟ್ ಮುಂಭಾಗದಲ್ಲಿರುವ ಗ್ಯಾರಾ ಮೂರ್ತಿ ಆಕೃತಿ ತಲೆ ಎತ್ತಲಿದೆ.ಜಿಲ್ಲಾ ಮಟ್ಟದಲ್ಲಿ ಗಾಂಧಿ ಭವನ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿಯಿದ್ದು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಸದಸ್ಯರಿರುತ್ತಾರೆ. ಜಿಲ್ಲಾ ವಾರ್ತಾಧಿಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಒಟ್ಟಾರೆಯಾಗಿ ಭವನ ಗಾಂಧಿ ಪ್ರಿಯರು, ಗಾಂಧಿವಾದಿಗಳು, ವಿದ್ಯಾರ್ಥಿಗಳು, ಮಕ್ಕಳು, ಸಾರ್ವಜನಿಕರು ಗಾಂಧಿ ಅವರನ್ನು ಅರಿಯುವವರಿಗೆ ಒಂದರ್ಧ ದಿನ ಕಳೆಯಲು ಒಂದು ಉತ್ತಮ ತಾಣವಾಗಲಿದೆ.
ಶೀಘ್ರ ಉದ್ಘಾಟನೆಗೊಳ್ಳಲಿದೆ ಭವನ
ಗಾಂಧಿ ವಿಚಾರ ಪ್ರಚಾರ ಮಾಡುವ ಉದ್ದೇಶದಿಂದ ಸರ್ಕಾರ ಜಿಲ್ಲೆಯಲ್ಲಿ ಗಾಂಧಿಭವನ ನಿರ್ಮಿಸುತ್ತಿದೆ. ಈ ಮೂಲಕ ಸಾರ್ವಜನಿಕರಿಗೆ ಗಾಂಧಿ ವಿಚಾರಗಳನ್ನು ತಲುಪಿಸುವ ಉದ್ದೇಶ ಇದಾಗಿದೆ. ಭವನ ಕಾಮಗಾರಿ ಸಾಗಿದ್ದು ಶೀಘ್ರ ಪೂರ್ಣಗೊಳ್ಳಲಿದೆ.
ಡಿ.ಅಶೋಕ್‌ಕುಮಾರ್, ಉಪನಿರ್ದೇಶಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ