

ಬಂಗಾರಪೇಟೆ: ಪಟಾಕಿ ಚೀಟಿ ಹೆಸರಿನಲ್ಲಿ ಬಡಬಗ್ಗರಿಗೆ ಸುಮಾರು 12 ಕೋಟಿ ರೂ. ಪಂಗನಾಮ ಹಾಕಿ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿರುವ ಕಿಂಗ್ಪಿನ್ ಭರತ್ನ ಮತ್ತೊಂದು ವಂಚನೆ ಪ್ರಕರಣ ಬಯಲಿಗೆ ಬಂದಿದೆ.
ಪಟ್ಟಣದ ಕೆಜಿಎಫ್ ರಸ್ತೆಯಲ್ಲಿರುವ ಜಿ.ಆರ್.ಮಾರ್ಕೆಟ್ ಕಟ್ಟಡದಲ್ಲಿ ಭರತ್ ಎಕ್ಸ್ಪರ್ಟ್ ಗಾರ್ಮೆಂಟ್ಸ್ ತೆರೆದು ಬಟ್ಟೆ ವ್ಯವಹಾರ ನಡೆಸುತ್ತಿದ್ದು, ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ ಒಂದೂವರೆ ತಿಂಗಳಿಂದ ವೇತನ ನೀಡದೆ ಇರುವುದರಿಂದ ಹಾಗೂ ಗಾರ್ಮೆಂಟ್ಸ್ಗೆ ಬೀಗ ಹಾಕಿದ್ದ ಹಿನ್ನೆಲೆಯಲ್ಲಿ ನೂರಾರು ಮಹಿಳಾ ಕಾರ್ಮಿಕರು ಪ್ರತಿಭಟನೆ ನಡೆಸಿದ್ದು, ವಂಚಕನ ಮತ್ತೊಂದು ಮುಖವಾಡ ಹೊರಬಿದ್ದಿದೆ.
ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 180ಕ್ಕೂ ಹೆಚ್ಚು ಕಾರ್ಮಿಕರಿಗೆ ವೇತನ ನೀಡದೆ ಲಕ್ಷಾಂತರ ಹಣ ವಂಚಿಸಿದ್ದಾನೆ ಎಂದು ಮಹಿಳಾ ಕಾರ್ಮಿಕರು ಆರೋಪಿಸಿದ್ದಾರೆ.
ಬಂಗಾರಪೇಟೆ ಗಾರ್ಮೆಂಟ್ಸ್ನಲ್ಲಿ 180, ಕೆಜಿಎಫ್ 80 ಮತ್ತು ವಿ.ಕೋಟ ಬಳಿಯ 40 ಮಂದಿ ಕಾರ್ಮಿಕರಿಗೆ ಕಳೆದ ಒಂದೂವರೆ ತಿಂಗಳಿಂದ ಕೂಲಿ ಹಣ ನೀಡಿಲ್ಲ ಎಂದು ಕಾರ್ಮಿಕರು ಆಪಾದಿಸಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆ ಬಾಕಿ ವೇತನ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಕಾರ್ಮಿಕರಿಗೆ ಈಗ ನಿರಾಸೆ ಉಂಟಾಗಿದೆ.
ದೀಪಾವಳಿಗೆ ಗಾರ್ಮೆಂಟ್ಸ್ಗೆ ರಜೆ ನೀಡಲಾಗಿದ್ದು, ಗುರುವಾರ ಬೆಳಗ್ಗೆ ಕಾರ್ಮಿಕರು ಕೆಲಸಕ್ಕೆ ಆಗಮಿಸಿದ್ದಾಗ ಬೀಗ ಹಾಕಿರುವುದು ಕಂಡು ಬಂದಿದೆ. ಇದನ್ನು ಕಂಡು ಸ್ಥಳದಲ್ಲೇ ಪ್ರತಿಭಟನೆ ನಡೆಸಲಾಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ ದೂರು ನೀಡುವಂತೆ ತಿಳಿಸಿ, ವಂಚನೆಗೊಳಗಾದ ಕಾರ್ಮಿಕರನ್ನು ಸಮಾಧಾನ ಪಡಿಸಿದರು.
ಬಡವರೇ ಟಾರ್ಗೆಟ್!
ಪಟಾಕಿ ಚೀಟಿ ಸದಸ್ಯರು ಮತ್ತು ಗಾರ್ಮೆಂಟ್ ಕಾರ್ಮಿಕರನ್ನು ವಂಚಿಸಿರುವುದನ್ನು ಗಮನಿಸಿದರೆ ಕಿಂಗ್ ಪಿನ್ ಭರತ್ ಬಡವರನ್ನೇ ಟಾರ್ಗೆಟ್ ಮಾಡಿರುವುಂತೆ ಕಾಣುತ್ತದೆ. ಅದರಲ್ಲೂ ಮಹಿಳೆಯರೇ ಹೆಚ್ಚಾಗಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಈಗಾಗಲೇ ಪಟಾಕಿ ಚೀಟಿ ವಂಚನೆಯಲ್ಲಿ ಕಿಂಗ್ಪಿನ್ ಭರತ್ ಮತ್ತು ಆತನ ಸಹೋದರಿ ಅರ್ಚನಾ ವಿರುದ್ಧ ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಇದುವರೆವಿಗೂ ವಂಚಕರು ಎಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ. ಹಲವರ ಜತೆಯಲ್ಲಿ ಕಿಂಗ್ಪಿನ್ ಭರತ್ ಸಂಪರ್ಕ ಮಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದಾನೆ ಎನ್ನಲಾಗಿದ್ದು, ಮೊಬೈಲ್ ಟ್ರ್ಯಾಕ್ ಮಾಡಿದರೆ ವಂಚಕರ ಸುಳಿವು ಪತ್ತೆ ಮಾಡಬಹುದಲ್ಲಾ ಅನ್ನೋದು ನೊಂದವರ ವಾದವಾಗಿದೆ.
ಕಾರ್ಮಿಕ ಇಲಾಖೆ ಅಧಿಕಾರಿ ಎಲ್ಲಿ?
ಭರತ್ನ ಎಕ್ಸ್ಫರ್ಟ್ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿರುವ ನೂರಾರು ಕಾರ್ಮಿಕರಿಗೆ ವೇತನ ನೀಡದೆ ವಂಚಿಸಿದ್ದು, ಇದರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲು ಕಾರ್ಮಿಕ ಇಲಾಖೆ ಅಧಿಕಾರಿಗಳು ಎಲ್ಲಿದ್ದಾರೆ? ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವ ಕಾರ್ಮಿಕರ ಹೆಸರನ್ನು ಗಾರ್ಮೆಂಟ್ಸ್ ಮಾಲೀಕರು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿರಬೇಕು. ಆದರೆ ಇಲ್ಲಿ ಯಾವೊಬ್ಬರನ್ನು ನೋಂದಾಯಿಸಿಲ್ಲ. ಕನಿಷ್ಠ ಕಾರ್ಮಿಕ ಇಲಾಖೆ ಅಧಿಕಾರಿಗಳು ಸಹ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.