

ಬೆಂಗಳೂರು: ಒಲೆಕ್ಟ್ರಾ ನಂತರ ಇದೀಗ ಮತ್ತೊಂದು ಸಂಸ್ಥೆ ತನ್ನ ಎಲೆಕ್ಟ್ರಿಕ್ ಬಸ್ ಅನ್ನು ಬಿಎಂಟಿಸಿಗೆ ನೀಡಿದ್ದು, ಆ ಬಸ್ನ ಪ್ರಾಯೋಗಿಕ ಸಂಚಾರ ಸೋಮವಾರದಿಂದ ಆರಂಭವಾಗಲಿದೆ.
ಕೇಂದ್ರ ಸರ್ಕಾರದ ಫೇಮ್ 2ನೇ ಹಂತದ ಅನುದಾನದಡಿ ಗುತ್ತಿಗೆ ಆಧಾರದಡಿ 300 ಹಾಗೂ ಸ್ಮಾರ್ಟ್ಸಿಟಿ ಅಡಿಯಲ್ಲಿ 90 ಎಲೆಕ್ಟ್ರಿಕ್ ಬಸ್ಗಳನ್ನು ಬಿಎಂಟಿಸಿ ಪಡೆದುಕೊಳ್ಳುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಈಗಾಗಲೆ ಟೆಂಡರ್ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಅದರಲ್ಲಿ ಬಿಡ್ ಸಲ್ಲಿಸಿರುವ ಹೈದರಾಬಾದ್ ಒಲೆಕ್ಟ್ರಾ ಸಂಸ್ಥೆ ತನ್ನ ಒಂದು ಬಸ್ ಅನ್ನು ಬಿಎಂಟಿಸಿಗೆ ನೀಡಿ ಪ್ರಾಯೋಗಿಕ ಸಂಚಾರ ನಡೆಸುವಂತೆ ಮನವಿ ಮಾಡಿತ್ತು. ಅದರಂತೆ ಕಳೆದ ತಿಂಗಳು ಬಿಎಂಟಿಸಿ ಆ ಬಸ್ನ ಪರೀೆ ನಡೆಸಿದೆ. ಇದೀಗ ಹರಿಯಾಣದ ರಿದಾಬಾದ್ ಮೂಲದ ಜೆಬಿಎಂ ಸಂಸ್ಥೆ ತನ್ನ ಬಸ್ ಅನ್ನು ಬಿಎಂಟಿಸಿಗೆ ನೀಡಿದೆ. ಈ ಬಸ್ ಅನ್ನು ಕೂಡ ಬಿಎಂಟಿಸಿ 1 ತಿಂಗಳು ಪ್ರಾಯೋಗಿಕ ಸಂಚಾರ ನಡೆಸಲಿದ್ದು, ಸೋಮವಾರದಿಂದ ಅದರ ಕಾರ್ಯಾಚರಣೆ ಆರಂಭಿಸಿದೆ.
12 ಮೀಟರ್ ಉದ್ದದ ಎಲೆಕ್ಟ್ರಿಕ್ ಬಸ್ ಅನ್ನು ಈಗಾಗಲೆ ಡಿಪೋ 7ರಲ್ಲಿ ಪರೀೆಗೊಳಪಡಿಸಲಾಗುತ್ತಿದೆ. ಸೋಮವಾರದಿಂದ ಬಸ್ ಅನ್ನು ರಸ್ತೆಗಿಳಿಸಲಾಗುತ್ತಿದ್ದು, ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಹೊರವರ್ತುಲ ರಸ್ತೆ, ಏರ್ಪೋರ್ಟ್ ರಸ್ತೆ ಸೇರಿ ಆಯ್ದ ಎಂಟು ಮಾರ್ಗಗಳಲ್ಲಿ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಲಾಗುತ್ತಿದೆ. ಆದರೆ, ಬಸ್ನಲ್ಲಿ ಪ್ರಯಾಣಿಕರ ಬದಲು ಮರಳು ಮೂಟೆಗಳನ್ನು ಹಾಕಿ ರಸ್ತೆಗಳಲ್ಲಿ ಸಂಚರಿಸುವಂತೆ ಮಾಡಲಾಗುತ್ತದೆ. ಈ ವೇಳೆ ಬಿಎಂಟಿಸಿಯ ತಾಂತ್ರಿಕ ಸಿಬ್ಬಂದಿಯೂ ಸಂಚರಿಸಿ, ಬಸ್ನ ನ್ಯೂನತೆ ಕಂಡು ಹಿಡಿಯುವ ಕೆಲಸ ಮಾಡಲಿದ್ದಾರೆ.