

ಬಳ್ಳಾರಿ: ಕೆಲ ತಿಂಗಳ ಹಿಂದೆ ರಾಷ್ಟ್ರವ್ಯಾಪಿ ಸದ್ದು ಮಾಡಿದ್ದ ಬಾಣಂತಿಯರ ಸರಣಿ ಸಾವಿನ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೋರ್ವ ಬಾಣಂತಿ ಮೃತಪಟ್ಟಿರುವ ಘಟನೆ ಬಳ್ಳಾರಿಯಲ್ಲಿ ವರದಿಯಾಗಿದೆ.
ಮೃತರನ್ನು ಬಳ್ಳಾರಿ ಜಿಲ್ಲೆ ಕುರುಗೋಡು ತಾಲ್ಲೂಕಿನ ನಿವಾಸಿ ಮಹಾದೇವಿ (21) ಎಂದು ಗುರುತಿಸಲಾಗಿದ್ದು, ಮಹಾದೇವಿ ಅವರಿಗೆ ಜನವರಿ 25ರಂದು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು.
ಹೆರಿಗೆ ಬಳಿಕ ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದರು ಎಂದು ತಿಳಿದು ಬಂದಿದೆ. ಹರಿಗೆಯಾದ ಐದು ದಿನಗಳ ಬಳಿಕ ಬಾಣಂತಿಗೆ ಇನ್ಫೆಕ್ಷನ್ ಆಗಿದೆ ಎಂದು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ, ಶುಕ್ರವಾರ (ಜನವರಿ 31) ರಾತ್ರಿ ತೀವ್ರ ಅಸ್ವಸ್ಥವಾಗಿ ಬಾಣಂತಿ ಮಹಾದೇವಿ ಮೃತಪಟ್ಟಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಿಮ್ಸ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈವರೆಗೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಅತಿಹೆಚ್ಚು ಬಾಣಂತಿಯರು ಮೃತಪಟ್ಟಿರುವುದು ಕಳವಳಕಾರಿ ಸಂಗತಿಯಾಗಿದೆ.