ಬುಳಸಂದ್ರ ಗ್ರಾಮದಲ್ಲಿ ಮತ್ತೆ 21 ಜನರು ಅಸ್ವಸ್ಥ

1
Published on

ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ | ಸ್ಥಳದಲ್ಲೆ ಬೀಡು ಬಿಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು

ವಿಜಯವಾಣಿ ಸುದ್ದಿಜಾಲ ಮಧುಗಿರಿ/ದೊಡ್ಡೇರಿ
ತಾಲೂಕಿನ ದೊಡ್ಡೇರಿ ಹೋಬಳಿಯ ಬುಳಸಂದ್ರ ಗ್ರಾಮದಲ್ಲಿ ವಾಂತಿ&ಭೇದಿ ಕಾಣಿಸಿಕೊಂಡು ಮತ್ತೆ 21 ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ.


ಬುಳಸಂದ್ರದಲ್ಲಿ ಶನಿವಾರ ಕರಿಯಮ್ಮ ಮುತ್ತುರಾಯ ಭೂತಪ್ಪ ಸ್ವಾಮಿ ಜಾತ್ರೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮದಲ್ಲಿ ಒಂದೇ ಕಡೆ ನೆಲೆಸಿರುವ ಮೂರು ಕುಟುಂಬದವರು ಏಕಾಏಕಿ ವಾಂತಿ ಭೇದಿಯಿಂದ ತತ್ತರಿಸಿದ್ದು, ಮೂವರು ಮೃತಪಟ್ಟಿದ್ದಾರೆ. 11 ಜನ ಅಸ್ವಸ್ಥರಾಗಿದ್ದರು. ಸೋಮವಾರ ರಾತ್ರಿ ಮತ್ತೆ 21 ಜನರು ಅಸ್ವಸ್ಥರಾಗಿದ್ದು, ಒಟ್ಟು 32 ಜನ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳದಲ್ಲೆ ಬೀಡು ಬಿಟ್ಟಿದ್ದು, ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆದು ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ.


ಗಡಿ ಭಾಗದ ಸೀಮಾಂಧ್ರದಲ್ಲಿ ಸಾಂಕ್ರಾಮಿಕ ಕಾಣಿಸಿಕೊಂಡಿದ್ದು, ಸೀಮಾಂಧ್ರದಿಂದ ಭಕ್ತರು ಜಾತ್ರೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಸೋಂಕು ಗ್ರಾಮಕ್ಕೂ ಹರಡಿರುವುದೇ ಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ.


ಡಿಸಿ ಶುಭಕಲ್ಯಾಣ್​ ಮಾತನಾಡಿ, ಗ್ರಾಮದಲ್ಲಿ 20ಕ್ಕೂ ಹೆಚ್ಚು ಮಂದಿ ವಾಂತಿ ಭೇದಿಯಿಂದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಶ್ರೀದೇವಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ. ಚಿನ್ನೆನಹಳ್ಳಿ ಪ್ರಕರಣಕ್ಕೂ ಬುಳಸಂದ್ರ ಪ್ರಕರಣಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂದು ತಿಳಿಸಿದರು.
ಜಿಪಂ ಸಿಇಒ ಜಿ ಪ್ರಭು, ಜಿಲ್ಲಾ ಆರೋಗ್ಯ ಅಧಿಕಾರಿ ಮಂಜುನಾಥ್​,ಎಸಿ ಗೋಟೂರು ಶಿವಪ್ಪ, ತಾಪಂ ಇಒ ಲ್ಮಣ್​, ಕುಡಿಯುವ ನೀರು ಇಲಾಖೆಯ ಲೋಕೇಶ್ವರಪ್ಪ, ತಾಲೂಕು ಆರೋಗ್ಯ ಅಧಿಕಾರಿ ಶ್ರೀನಿವಾಸ್​ ಇದ್ದರು.

ಗ್ರಾಮಕ್ಕೆ ಸಚಿವ ರಾಜಣ್ಣ ಭೇಟಿ: ಬುಳಸಂದ್ರಕ್ಕೆ ಸಹಕಾರ ಸಚಿವ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಗಡಿ ಭಾಗದ ಆಂಧ್ರಪ್ರದೇಶದಿಂದ ಬಂದ ಸಾಂಕ್ರಾಮಿಕ ಸೋಂಕಿತರೊಬ್ಬರು ಮೃತಪಟ್ಟಿದ್ದು, ಗ್ರಾಮದ ವೃದ್ಧರಿಬ್ಬರು ವಯಸ್ಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಜನರು ಆತಂಕ ಪಡುವ ಅವಶ್ಯಕತೆ ಇಲ್ಲ. ಸರ್ಕಾರ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸದಾ ನಿಮ್ಮ ಜತೆಗಿರುತ್ತದೆ. ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನಲ್ಲಿ ಇತ್ತೀಚೆಗೆ ದೇವರ ಕಾರ್ಯನಡೆದಿದ್ದು, ಈ ಹಳ್ಳಿಗಳಲ್ಲಿ ವಾಂತಿ ಭೇದಿಯಿಂದ ಹೆಚ್ಚು ಜನರು ಸಾವನ್ನಪ್ಪಿದ್ದು, ಈ ಊರಿನಿಂದ ಬಂದ ರೋಗಿಯೊಬ್ಬರು ಸೋಂಕಿಗೆ ತುತ್ತಾಗಿ ಗ್ರಾಮದಲ್ಲಿ ಮೃತಪಟ್ಟಿದ್ದಾರೆ. ಬುಳಸಂದ್ರದಲ್ಲಿ ನಡೆದಿರುವ ಪ್ರಕರಣದಲ್ಲಿ ನೀರಿನಿಂದಾಗಲಿ ಆಹಾರದಿಂದಾಗಲಿ ವಾಂತಿ ಭೇದಿ ಆಗಿಲ್ಲ. ಜಾತ್ರೆ ಸಂದರ್ಭದಲ್ಲಿ ಹೆಚ್ಚು ಭಕ್ತಾದಿಗಳು ಬಂದಿದ್ದರಿಂದ ಅವರಿಂದ ಸಾಂಕ್ರಾಮಿಕ ರೋಗ ಹರಡಿರಬಹುದು ಎಂದು ಶಂಕಿಸಲಾಗಿದೆ. ಯಾವುದೇ ಭಯಪಡುವ ಅವಶ್ಯಕತೆ ಇಲ್ಲ. ದೇವತಾ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಿ ಎಂದು ಗ್ರಾಮಸ್ಥರಿಗೆ ತಿಳಿಸಿದರು.

ಮುನ್ನೆಚ್ಚರಿಕೆಯಾಗಿ ಆರೋಗ್ಯ ಸಮೀಕ್ಷೆ

ತುಮಕೂರು: ಮಧುಗಿರಿ ತಾಲೂಕು ಬುಳಸಂದ್ರದಲ್ಲಿ ವರದಿಯಾಗಿರುವ ವಾಂತಿ, ಭೇದಿ ಪ್ರಕರಣಗಳಿಗೆ ಕಲುಷಿತ ನೀರು ಕಾರಣವಲ್ಲ. ಆದರೂ, ಮುನ್ನೆಚ್ಚರಿಕೆಯಾಗಿ ಎಲ್ಲ ಮನೆಗಳಲ್ಲಿಯೂ ಜನರ ಆರೋಗ್ಯದ ಬಗ್ಗೆ ಸಮೀೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಸ್ಪಷ್ಟನೆ ನೀಡಿದ್ದಾರೆ.
ವಾಂತಿ, ಭೇದಿಯಿಂದ ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯೇ ಅಧಿಕಾರಿಗಳೊಂದಿಗೆ ಬುಳಸಂದ್ರಕ್ಕೆ ದೌಡಾಯಿಸಿದ ಶುಭಕಲ್ಯಾಣ್​, ಘಟನೆಯ ಬಗ್ಗೆ ಅಧಿಕಾರಿಗಳು ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದು ಸಚಿವ ಕೆ.ಎನ್​.ರಾಜಣ್ಣ ಅವರಿಗೆ ದೂರವಾಣಿ ಮೂಲಕ ವರದಿ ಒಪ್ಪಿಸಿದರು. ನೀರನ್ನು ಕಾಯಿಸಿ-, ಆರಿಸಿ ಕುಡಿಯಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಎಲ್ಲರೂ ಶೌಚಗೃಹ ಬಳಸಬೇಕು. ಶೌಚದ ನಂತರ ಕೈಗಳನ್ನು ಸಾಬೂನಿನಿಂದ ಶುಚಿಗೊಳಿಸಬೇಕು ಎಂದು ಗ್ರಾಮಸ್ಥರಿಗೆ ಜಿಲ್ಲಾಧಿಕಾರಿ ಸಲಹೆ ನೀಡಿದರು. ಮುನ್ನೆಚ್ಚರಿಕಾ ಕ್ರಮವಾಗಿ ಆಶಾ ಕಾರ್ಯಕರ್ತೆಯರು ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಮನೆಯ ಸದಸ್ಯರ ಆರೋಗ್ಯದ ಬಗ್ಗೆ ಸಮೀಕ್ಷೆ ಮಾಡಲಿದ್ದಾರೆ. ಆ.31ರಂದು ಶ್ರಾವಣ ಮಾಸದ ಕಡೆಯ ಶನಿವಾರ ಇರುವುದರಿಂದ ಗ್ರಾಮದ ದೇವಾಲಯಗಳಲ್ಲಿ ವಿಶೇಷ ಪೂಜೆ, ಜಾತ್ರೆಗಳು ನಡೆಯುವುದರಿಂದ ಸ್ವಚ್ಛತೆ, ಕುಡಿಯುವ ನೀರಿನ ಬಗ್ಗೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಪ್ರಕರಣಗಳು ಮರುಕಳಿಸದಂತೆ ಹೆಚ್ಚಿನ ಜಾಗ್ರತೆ ವಹಿಸಲಾಗಿದೆ ಎಂದರು.

ಪ್ರಸಾದ ವಿತರಣೆಗೆ ಅನುಮತಿ ಕಡ್ಡಾಯ!
ಜಾತ್ರೆಗಳನ್ನು ನಡೆಸುವ ದೇವಸ್ಥಾನದ ಸಮಿತಿ ಪ್ರಸಾದ ವಿತರಣೆಗೂ ಮುನ್ನ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಪ್ರಸಾದ ತಯಾರಿಸುವ ಪಾತ್ರೆಗಳು ಸ್ವಚ್ಛವಾಗಿಡುವ, ಜನ ಸಮೂಹಕ್ಕೆ ಪ್ರಸಾದ ವಿತರಣೆ ಮಾಡುವಾಗ ಹೆಚ್ಚಿನ ಜಾಗ್ರತೆ ವಹಿಸುವ ಬಗ್ಗೆ ಸಮಿತಿ ನಿಗಾವಹಿಸಬೇಕು. ಸಮಿತಿಯ ಸೂಚನೆ ಪಾಲಿಸದೆ ರ್ನಿಲಕ್ಷ$್ಯ ತೋರುವ ದೇವಸ್ಥಾನದ ಸಮಿತಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಎಚ್ಚರಿಕೆ ನೀಡಿದರು.

ಸಹಜ ಸಾವು ಎಂದು ವರದಿ ನೀಡಿದ ತಾಲೂಕು ಆಡಳಿತ!
ಬುಳಸಂದ್ರ ಗ್ರಾಮದಲ್ಲಿ ಶ್ರಾವಣ ಶನಿವಾರ ಪ್ರಯುಕ್ತ ಆ.24ರ ಶನಿವಾರದಿಂದ 3 ದಿನಗಳ ಕಾಲ ಹಮ್ಮಿಕೊಂಡಿದ್ದ ಕರಿಯಮ್ಮ, ಮುತ್ರಾಯ, ಭೂತಪ್ಪ ಸ್ವಾಮಿಯ ಜಾತ್ರೆ ಸಂದರ್ಭದಲ್ಲಿ ತಿಮ್ಮಕ್ಕ(85), ಗಿರಿಯಮ್ಮ(90) ಹಾಗೂ ಕಾಟಮ್ಮ(45) ಮರಣ ಹೊಂದಿದ್ದಾರೆ. ವೈದ್ಯರ ವರದಿ ಪ್ರಕಾರ ತಿಮ್ಮಕ್ಕ ಮತ್ತು ಗಿರಿಯಮ್ಮ ಸಾವು ವಯಸ್ಸಹಜವಾಗಿದ್ದು, ಮೃತಪಡುವ ಮುನ್ನ ಇವರಿಬ್ಬರಲ್ಲೂ ವಾಂತಿ, ಭೇದಿ ಕಾಣಿಸಿಕೊಂಡಿರುವುದಿಲ್ಲ. ಕಾಟಮ್ಮ ಎಂಬ ಮಹಿಳೆ ಆಂಧ್ರಪ್ರದೇಶದ ಮಡಕಶಿರಾ ತಾಲೂಕು ಸಿದ್ಧಗಿರಿ ಗ್ರಾಮದಿಂದ ಜಾತ್ರೆಗಾಗಿ ತವರಿಗೆ ಬಂದಿದ್ದು, ಗ್ರಾಮಕ್ಕೆ ಬರುವ ಮುನ್ನವೇ ಈಕೆಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ವಾಂತಿ, ಭೇದಿಯಿಂದ ಅಸ್ವಸ್ಥಗೊಂಡು ಕಾಟಮ್ಮ ಮೃತಪಟ್ಟಿದ್ದಾರೆ. ಕಲುಷಿತ ನೀರಿನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿ ನೀಡಿದ್ದಾರೆ. ಮೃತಪಟ್ಟ ದುರ್ದೈವಿ ತಾವೇ ತಯಾರಿಸಿದ ಟೊಮ್ಯಾಟೊ ಬಾತ್​, ಮಜ್ಜಿಗೆ ಸೇವಿಸಿದ ನಂತರ ಅಸ್ವಸ್ಥಗೊಂಡಿರುವ ಸಾಧ್ಯತೆ ಇದೆ ಎಂದು ವರದಿ ನೀಡಲಾಗಿದೆಯಾದರೂ ಬುಳಸಂದ್ರದಲ್ಲಿ ಪ್ರಸ್ತುತ 16 ಜನರಲ್ಲಿ ವಾಂತಿ-&ಭೇದಿ ಕಾಣಿಸಿಕೊಂಡಿದೆ. ಈ ಪೈಕಿ 9 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಹಾಗೂ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದ 18 ವರ್ಷದ ಯುವಕನೊಬ್ಬನಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ತಾತ್ಕಾಲಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜನರ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಜಾತ್ರಾ ಸಂದರ್ಭಗಳಲ್ಲಿ ಅವಘಡಗಳು ನಡೆಯದಂತೆ ಕಟ್ಟೆಚ್ಚರ ವಹಿಸಲು ತಾಪಂ ಇಒ, ತಹಸೀಲ್ದಾರ್​, ಟಿಎಚ್​ಒ, ಆಹಾರ ಸುರಕ್ಷತಾಧಿಕಾರಿ, ಡಿವೈಎಸ್​ಪಿ ಅವರನ್ನು ಒಳಗೊಂಡ ತಾಲೂಕುಮಟ್ಟದ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಈ ಸಮಿತಿಯ ಅನುಮತಿ ಪಡೆದರಷ್ಟೇ ದೇವಾಲಯಗಳಲ್ಲಿ ಪ್ರಸಾದ ವಿತರಣೆ ಮಾಡಬೇಕು.| ಶುಭಕಲ್ಯಾಣ್​, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net