

ಬೆಳಗಾವಿ: ತಹಸೀಲ್ದಾರ್ ಕಚೇರಿ ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಮಾಡಿಕೊಂಡಿಲ.ಕೊಲೆ ಮಾಡಲಾಗಿದೆ ಎಂದು ಬರೆದ ಅನಾಮಧೇಯ ಪತ್ರವೊಂದು ಖಡೇಬಜಾರ್ ಎಸಿಪಿ ಅವರಿಗೆ ಬಂದಿದೆ.
ಪ್ರಕರಣದಲ್ಲಿ ಆರೋಪಿಗಳಾದ ತಹಸೀಲ್ದಾರ್ ಬಸವರಾಜ ನಾಗರಾಳ, ಎಫ್‌ಡಿಎ ಅಶೋಕ ಕಬ್ಬಲಿಗೇರ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಆಪ್ತ ಸಹಾಯಕ ಸೋಮು ದೊಡವಾಡಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರಾದ ಬೆನ್ನಲ್ಲೇ, ಈ ಪತ್ರ ಬಂದಿದೆ.
ಪತ್ರವನ್ನು ಲಕೋಟೆಯಲ್ಲಿ ಹಾಕಿ ಖಡೇಬಜಾರ್ ಠಾಣೆಗೆ ಪೋಸ್ಟ್ ಮಾಡಲಾಗಿದೆ. ಇದರ ಪ್ರತಿಗಳನ್ನು ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು ಸೇರಿ ಹಲವರಿಗೆ ಪೋಸ್ಟ್ ಮಾಡಲಾಗಿದೆ ಎಂದೂ ಪತ್ರದಲ್ಲಿ ಬರೆಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್, ಪತ್ರ ಬಂದಿರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.