ವಾರ್ಷಿಕ ತಾಳಮದ್ದಳೆ ಸರಣಿ ಸೆ. 9ರಿಂದ

thalmaddale
Published on

ಶಿರಸಿ: ನಗರದ ಯಕ್ಷ ಸಂಭ್ರಮ ಟ್ರಸ್ಟ್ ತನ್ನ 9ನೇ ವರ್ಷದ ವಾರ್ಷಿಕ ತಾಳಮದ್ದಳೆ ಸರಣಿ-2023 ಅನ್ನು ಸೆಪ್ಟೆಂಬರ್ 9 ರಿಂದ 9 ದಿನಗಳ ಕಾಲ ನಡೆಸಲು ತೀರ್ಮಾನಿಸಿದೆ. ಶ್ರೀರಾಮ ನವರತ್ನಮ್ ಶೀರ್ಷಿಕೆ ಅಡಿಯಲ್ಲಿ ರಾಮಾಯಣದ ಪ್ರಮುಖ ಪ್ರಸಂಗಗಳನ್ನು ಪ್ರಸ್ತುತ ಪಡಿಸಲಿದೆ. 2023ರ ಚಂದುಬಾಬು ಪ್ರಶಸ್ತಿಯನ್ನು ಹಿರಿಯ ಅರ್ಥಧಾರಿ, ವಿದ್ವಾಂಸ, ಸಂಶೋಧಕ, ಕವಿ ಅತ್ತಿಮುರುಡು ವಿಶ್ವೇಶ್ವರ ಹೆಗಡೆ ಅವರಿಗೆ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಎಂದು ಟ್ರಸ್ಟ್ ಕೋಶಾಧ್ಯಕ್ಷ ಸೀತಾರಾಮ ಚಂದು ತಿಳಿಸಿದ್ದಾರೆ.

ಸ್ವರ್ಣವಲ್ಲೀಯ ಸುಧರ್ಮಾ ಸಭಾಭವನದಲ್ಲಿ ಸೆ.9ರ ರಂದು ಸಂಜೆ 5 ಗಂಟೆಗೆ ತಾಳಮದ್ದಲೆ ಸರಣಿ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ. ಸ್ವರ್ಣವಲ್ಲೀ ಮಠಾಧೀಶ ಶ್ರೀ ಮಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಾಳಮದ್ದಲೆ ಸರಣಿಗೆ ಚಾಲನೆ ನೀಡಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಅತ್ತಿಮುರುಡು ವಿಶ್ವೇಶ್ವರ ಹೆಗಡೆ ಅವರು ಬಹುಶ್ರುತ ವಿದ್ವಾಂಸರು, ಕವಿಯು, ಸಂಶೋಧಕರು, ವಾಗ್ಮಿಗಳು, ಅಂಕಣಕಾರರು, ಹಿರಿಯ ಅರ್ಥಧಾರಿಗಳು, ಹಲವು ಕೃತಿಗಳ ಅನುವಾದಕರು ಆಗಿದ್ದಾರೆ. ಕನ್ನಡ, ಇಂಗ್ಲಿಷ್, ಸಂಸ್ಕೃತ, ಹಿಂದಿ ಭಾಷೆಯಲ್ಲಿ ಪರಿಣತಿಯುಳ್ಳವರು. ಶರಾಧವ ಕಾವ್ಯನಾಮದಿಂದ ಪ್ರಖ್ಯಾತರು. ಮೂರು ಕವನ ಸಂಕಲನಗಳು, ಒಂದು ಪ್ರಬಂಧ ಸಂಕಲನ, ಐತಿಹಾಸಿಕ ಕ್ಷೇತ್ರಾಧ್ಯಯನದ ಎರಡು ಕೃತಿಗಳು, ಸ್ವಾತಂತ್ರ್ಯ ಹೋರಾಟದ ಕರಪತ್ರಗಳ ದಾಖಲೆ ಸಂಪಾದನೆ, ನಾಟ್ಯಶಾಸ್ತ್ರದ ಮೇಲೆ ಅನುವಾದಿಸಿದ ಮೂರು ಕೃತಿಗಳು, ಒಂದು ರೂಪಕ ಪ್ರಕಟವಾಗಿವೆ.

ಸೆ. 10ರಿಂದ ಎಂಟು ದಿನಗಳ ಕಾಲ ಸರಣಿ ತಾಳಮದ್ದಳೆಯು ಶಿರಸಿ ಟಿಎಂಎಸ್ ಸಭಾಭವನದಲ್ಲಿ ಪ್ರತಿದಿನ ಸಂಜೆ 4ರಿಂದ ನಡೆಯಲಿದೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಹಿರಿಯ ಅರ್ಥಧಾರಿಗಳು, ಪ್ರಖ್ಯಾತ ಭಾಗವತರು ತಾಳಮದ್ದಳೆ ಸರಣಿಯನ್ನು ರಂಜಿಸಲಿದ್ದಾರೆ ಎಂದು ಸೀತಾರಾಮ ಚಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net