

ಗುರುಪುರ: ಅಡ್ಡೂರಿನ ಸಹರಾ ಪಪೂ ಕಾಲೇಜಿನ 2024-25ನೇ ಶೈಕ್ಷಣಿಕ ವರ್ಷದ ಕ್ರೀಡಾಕೂಟ ಶನಿವಾರ ಕಾಲೇಜು ಮೈದಾನದಲ್ಲಿ ನಡೆಯಿತು.
ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಯು.ಪಿ.ಇಬ್ರಾಹಿಂ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು ಗೆಲುವು ಸಹಜ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಮುಂದಿನ ಗುರಿಯತ್ತ ದೃಷ್ಟಿ ಹರಿಸಬೇಕು ಎಂದರು.
ಕ್ರೀಡಾಕೂಟಕ್ಕೆ ಮುಂಚೆ ವಿದ್ಯಾರ್ಥಿಗಳಿಂದ ಪಥಸಂಚಲನ, ಕ್ರೀಡಾ ಪ್ರತಿಜ್ಞೆ ಸ್ವೀಕಾರ, ಕ್ರೀಡಾ ಜ್ಯೋತಿ ಬೆಳಗಿಸುವಿಕೆ ನಡೆಯಿತು. ಶಾಲಾ ಸಂಚಾಲಕ ಎ.ಕೆ.ಇಸ್ಮಾಯಿಲ್ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಫೈವ್ ಸ್ಟಾರ್ ಬಾಯ್ಸ ಅಧ್ಯಕ್ಷ ಹಬೀಬ್, ಕಾರ್ಯದರ್ಶಿ ಎನ್.ಇಸ್ಮಾಯಿಲ್, ಕೋಶಾಧಿಕಾರಿ ಎ.ಕೆ.ಅಶ್ರಫ್, ಆಡಳಿತ ಮಂಡಳಿ ಸದಸ್ಯರಾದ ಎ. ಕೆ.ಮೊಹಮ್ಮದ್, ಎ.ಜಿ.ಅಬ್ದುಲ್ ಖಾದರ್, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವೀಕ್ಷಿತಾ ಸ್ವಾಗತಿಸಿದರು. ಪ್ರಾಂಶುಪಾಲ ಕೇಶವ ಎಚ್. ಪ್ರಸ್ತಾವಿಸಿದರು. ಮೋಹಿನಿ, ದೀಪ್ತಿ ನಿರೂಪಿಸಿದರು. ಅಂಕಿತಾ ವಂದಿಸಿದರು.