ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮಪ್ರಸಾದ ಮೆರವಣಿಗೆ

udp-26-parama prasada
Published on

ಉಡುಪಿ: ಕೆಥೋಲಿಕ್​ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜ ಮಹೋತ್ಸವ ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್​ ಕ್ಯಾಥೆಡ್ರಲ್​ ನಲ್ಲಿ ಜರುಗಿತು.

ಪ್ರಧಾನ ಬಲಿಪೂಜೆಯ ನೇತೃತ್ವವನ್ನು ಉಡುಪಿ ಧರ್ಮಪ್ರಾಂತ್ಯದ ಧಮಾರ್ಧ್ಯಕ್ಷ ಡಾ. ಜೆರಾಲ್ಡ್​ ಐಸಾಕ್​ ಲೋಬೊ ವಹಿಸಿ, ನಾವು ತೋರಿಸುವ ಪ್ರೀತಿ ಕೇವಲ ತೋರ್ಪಡಿಕೆಯಾಗಿರದೆ ಅದನ್ನು ಕಾರ್ಯದ ಮೂಲಕ ಮಾಡಿ ತೋರಿಸುವಂತಿರಬೇಕು. ಪ್ರೀತಿ ಮತ್ತು ಸೇವೆ ಕೆಸ್ತ ಧರ್ಮದ ಮೂಲ ತತ್ತ್ವವಾಗಿದ್ದು, ಅದನ್ನು ನಮ್ಮ ನೆರೆಹೊರೆಯವರಲ್ಲಿ ತೋರ್ಪಡಿಸಲು ಹಿಂಜರಿಯಬಾರದು ಎಂದರು.

ಪವಿತ್ರ ಬಲಿಪೂಜೆಯ ಬಳಿಕ ಧರ್ಮಗುರು ಸಿರಿಲ್​ ಲೋಬೊ ಪರಮಪ್ರಸಾದ ಆರಾಧನೆಯನ್ನು ನೆರವೇರಿಸಿದರು. ಬಳಿಕ ಪರಮಪ್ರಸಾದವನ್ನು ವಿಶೇಷವಾಗಿ ಅಲಂಕರಿಸಲ್ಪಟ್ಟ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ದು ಸಂತೆಕಟ್ಟೆ ಕಲ್ಯಾಣಪುರ ಮೌಂಟ್​ ರೋಸರಿ ಚರ್ಚಿನ ಮೈದಾನದಲ್ಲಿ ಬಹಿರಂಗ ಪ್ರಾರ್ಥನೆ ಮೂಲಕ ಗೌರವ ಸಲ್ಲಿಸಲಾಯಿತು.

ಉದ್ಯಾವರ ಸಂತ ಫ್ರಾನ್ಸಿಸ್​ ಝೇವಿಯರ್​ ಚರ್ಚಿನ ಸಹಾಯಕ ಧರ್ಮಗುರು ಲಿಯೊ ಪ್ರವಿಣ್​ ಡಿ'ಸೋಜಾ ಪವಿತ್ರ ಬೈಬಲ್​ ವಾಚನ ಮಾಡಿದರು. ಉಡುಪಿ ಧರ್ಮಪ್ರಾಂತ್ಯವ್ಯಾಪ್ತಿಯ 51 ಚರ್ಚ್​ಗಳಿಂದ ಸುಮಾರು 3000 ಕ್ಕೂ ಅಧಿಕ ಮಂದಿ ಭಕ್ತಾದಿಗಳು, 50ಕ್ಕೂ ಅಧಿಕ ಧರ್ಮಗುರುಗಳು, 100ಕ್ಕೂ ಅಧಿಕ ಧರ್ಮಭಗಿನಿಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net