

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸ್ವರ ಲಯಾರಾಧನೆ ಸಂಗೀತ ಸಂಸ್ಥೆ ಹಾಗೂ ಸುಮಧ್ವ ಸಂಗೀತ ವಿದ್ಯಾಲಯದ ವಾರ್ಷಿಕ ಸಂಗೀತೋತ್ಸವ ಸಮಾರಂಭವನ್ನು ಫೆ. 9ರಂದು ಇಲ್ಲಿನ ಆಲೂರು ವೆಂಕಟರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಜಯತೀರ್ಥ ಪಂಚಮುಖಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 2 ಗಂಟೆಗೆ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ ಹಾಗೂ ತಬಲಾ ವಾದನ ನಡೆಯಲಿದೆ. ಸಂಜೆ 6 ಗಂಟೆಗೆ ಏರ್ಪಡಿಸಿರುವ ಸಭಾ ಕಾರ್ಯಕ್ರಮವನ್ನು ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಟ್ರಸ್ಟಿ ಭಾರತಿದೇವಿ ರಾಜಗುರು ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಯಾಗಿ ನ್ಯಾಯವಾದಿ ಅರುಣ ಜೋಶಿ ಆಗಮಿಸಲಿದ್ದಾರೆ ಎಂದರು.
ಡಾ. ರಾಚಯ್ಯ ಹಿರೇಮಠ, ಡಾ. ಮೃತ್ಯುಂಜಯ ಅಗಡಿ, ಡಾ. ಜ್ಯೋತಿಲಕ್ಷ್ಮೀ ಡಿ.ಪಿ., ಡಾ. ಶಿವಲೀಲಾ ವೈಜಿನಾಥ ಮತ್ತು ನಾಗರತ್ನಾ ಹೊಳಗುಂದಿ ಅವರಿಗೆ ಸನ್ಮಾನಿಸಲಾಗುವುದು. ನಂತರದಲ್ಲಿ ವಸುಧಾ ಶರ್ಮಾ ದಂಪತಿ ಹಾಗೂ ಡಾ. ಉದಯರಾಜ ಕರ್ಪೂರ ದಂಪತಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಮಾಸ್ಟರ್ ಪ್ರದ್ಯುಮ್ನ ಕರ್ಪೂರ ತಬಲಾ ಸೋಲೊ ಪ್ರಸ್ತುತಪಡಿಸಲಿದ್ದು, ಸೂರ್ಯ ಉಪಾಧ್ಯಾಯ ಲೆಹರಾ ಸಾಥ್ ನೀಡಲಿದ್ದಾರೆ. ವಸುಧಾ ಶರ್ಮಾ ಗಾಯನ ಕಾರ್ಯಕ್ರಮ ನಡೆಸಿಕೊಡುವರು. ಡಾ. ಉದಯರಾಜ ಕರ್ಪೂರ ತಬಲಾ ಹಾಗೂ ಬಸು ಹಿರೇಮಠ ಸಂವಾದಿನಿಯಲ್ಲಿ ಸಾಥ್ ನೀಡಲಿದ್ದಾರೆ ಎಂದರು.
ವೈಷ್ಣವಿ ಪಂಚಮುಖಿ, ಪವನಕುಮಾರ ಥಿಟೆ, ಲತಾ ಕುಲಕರ್ಣಿ, ಇತರರು ಇದ್ದರು.