

ವಿಜಯವಾಣಿ ಸುದ್ದಿಜಾಲ ಉಡುಪಿ
ದೇವರು ಮಾನವರ ಮೇಲೆ ತೋರುವ ಪ್ರೀತಿ ಶಾಶ್ವತವಾಗಿದ್ದು, ಎಂದಿಗೂ ಅಂತ್ಯವಿರುವುದಿಲ್ಲ. ಹೀಗಾಗಿ ದೇವರಲ್ಲಿ ನಮ್ಮ ವಿಶ್ವಾಸ ಕಡಿಮೆಗೊಳಿಸದೆ ಬದುಕಿದಾಗ ಜೀವನ ಎಂದಿಗೂ ನಿಷ್ಕ್ರಿಯ ಆಗಲು ಬಿಡುವುದಿಲ್ಲ ಎಂದು ಮಂಗಳೂರು ಬಿಕರ್ನಕಟ್ಟೆ ಇನ್ಫೆಂಟ್ ಜೀಸಸ್ ಚರ್ಚ್ನ ವಂ.ಸ್ಟೀಫನ್ ಪಿರೇರಾ ಹೇಳಿದರು.
ಮಲ್ಪೆಯ ತೊಟ್ಟಂ ಚರ್ಚ್ನಲ್ಲಿ ಪಾಲಕರಾದ ಸಂತ ಅನ್ನಮ್ಮ ಮತ್ತು ಸಂತ ಜೋಕಿಮ್ ಅವರ ವಾರ್ಷಿಕ ಸ್ಮರಣೆಯ ಪವಿತ್ರ ಬಲಿಪೂಜೆಯ ನಿಮಿತ್ತ ಜುಲೈ 26ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂದೇಶ ನೀಡಿದರು.
ಚರ್ಚ್ನ ಪ್ರಧಾನ ಧರ್ಮಗುರು ವಂ. ಡೆನಿಸ್ ಡೆಸಾ ಮಾತನಾಡಿ, ಸಂತ ಅನ್ನಮ್ಮ ಮತ್ತು ಸಂತ ಜೋಕಿಮ್ ಹಿರಿಯರ ಪಾಲಕಿಯರಾಗಿದ್ದಾರೆ. ಇಂದಿನ ದಿನಗಳಲ್ಲಿ ನಮ್ಮ ಅಜ್ಜ-ಅಜ್ಜಿಯಂದಿರನ್ನು ವೃದ್ಧಾಶ್ರಮದಲ್ಲಿ ಇಡುವುದನ್ನು ಹೆಚ್ಚು ಕಾಣುತ್ತಿದ್ದೇವೆ. ಆದರೆ, ಹಿರಿಯ ಜೀವಗಳು ಮಕ್ಕಳಿಗೆ ಮೌಲ್ಯ ಕಲಿಸುವುದರೊಂದಿಗೆ ಉತ್ತಮ ಜೀವನ ನಡೆಸಲು ಮಾರ್ಗದರ್ಶಕರಾಗುತ್ತಾರೆ. ಅವರು ಕಲಿಸುವ ತಾಳ್ಮೆ ಹಾಗೂ ಸಹನೆಯ ಪಾಠಗಳು ಸದಾ ನಮಗೆ ದಾರಿದೀಪವಾಗುತ್ತದೆ ಎಂದರು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಉಡುಪಿ ವಲಯ ಪ್ರಧಾನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಪೆರ್ನಾಲ್ ಚರ್ಚ್ನ ಧರ್ಮಗುರು ವಂ.ಜೆರೋಮ್ ಮೊಂತೆರೋ, ವಂ. ವಿನ್ಸೆಂಟ್ ಕ್ರಾಸ್ತಾ, ವಂ.ಸುನೀಲ್ ಡಿಸಿಲ್ವಾ, ವಂ.ಪಿಲಿಪ್ ನೆರಿ ಆರಾನ್ಹಾ, ವಂ.ವಿಕ್ಟರ್ ಡಿಸೋಜಾ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್ ಇತರರು ಉಪಸ್ಥಿತರಿದ್ದರು.
ಸಂತ ಅನ್ನಮ್ಮ ಮತ್ತು ಸಂತ ಜೋಕಿಮ್ ತಮ್ಮ ಜೀವನದಲ್ಲಿ ದೇವರಲ್ಲಿ ಸದಾ ವಿಶ್ವಾಸಿಗಳಾಗಿ ಬದುಕಿದರು. ಅವರ ಮಾರ್ಗದಲ್ಲಿ ನಡೆದಾಗ ನಮ್ಮೆಲ್ಲರ ಕುಟುಂಬಗಳೂ ಸಹ ಆಶೀರ್ವದಿಸಲ್ಪಡುತ್ತವೆ. ನಮ್ಮ ನೆರೆ&ಹೊರೆಯಲ್ಲಿರುವ ನಿರ್ಗತಿಕರಿಗೆ ಪ್ರೀತಿ, ವಿಶ್ವಾಸ ತೋರುವ ಮೂಲಕ ದೇವರಿಗೆ ಇನ್ನಷ್ಟು ಹತ್ತಿರವಾಗೋಣ. | ಸ್ಟೀಫನ್ ಪಿರೇರಾ. ಬಿಕರ್ನಕಟ್ಟೆ ಇನ್ಫೆಂಟ್ ಜೀಸಸ್ ಚರ್ಚ್