ಕೇರ್ಗಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ

15
Published on

ಮೈಸೂರು: ಮೈಸೂರು ತಾಲೂಕು ಕೇರ್ಗಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 2023-24ನೇ ಸಾಲಿನಲ್ಲಿ 631 ಸದಸ್ಯರಿಗೆ 8,95,43,620 ರೂ. ಸಾಲ ವಿತರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕಾಳೇಗೌಡ ತಿಳಿಸಿದರು.
ಸಂಘದಿಂದ ಕೇರ್ಗಳ್ಳಿಯ ಶ್ರೀಹೊಂಬಾಳಮ್ಮ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಕ್ಕೆ ಕೇರ್ಗಳ್ಳಿ ಅಲ್ಲದೇ ಬಡಗಲಹುಂಡಿ, ನಂಜರಾಜಯ್ಯನಹುಂಡಿ, ರಾಮನಹುಂಡಿ, ಕೆ.ಸಾಲುಂಡಿ, ಮೂಗನಹುಂಡಿ, ನಗರ್ತಹಳ್ಳಿ, ಯಡಹಳ್ಳಿ, ಕೆಂಚಲಗೂಡು ಈ ಏಳು ಗ್ರಾಮಗಳ 1050 ಸದಸ್ಯರಿದ್ದು, ರೈತರಿಗೆ ಕೊಟ್ಟ ಸಾಲದಲ್ಲಿ ಶೇ. 97 ಸಾಲ ವಸೂಲಾಗಿದೆ. ಇದರಿಂದ ಬ್ಯಾಂಕಿಗೆ ಶೇ. 100 ಸಾಲವನ್ನು ಸಂಘದಿಂದ ಕಟ್ಟಿದ್ದೇವೆ ಎಂದು ಹೇಳಿದರು.
ಯಡಹಳ್ಳಿಯ ಮಹಿಳಾ ಸಂಘಕ್ಕೆ ಶೇ. 12 ಬಡ್ಡಿ ದರದಲ್ಲಿ 10 ಲಕ್ಷ ರೂ. ಸಾಲ ನೀಡಿದ್ದೇವೆ. ಇನ್ನೂ ಹೆಚ್ಚಿನ ಮಹಿಳಾ ಸಂಘಗಳು ಸಾಲ ಕೇಳಿದರೆ ನಾವು ಕೊಡಲು ಸಿದ್ಧರಿದ್ದೇವೆ. ನಮ್ಮ ಸಹಕಾರ ಸಂಘಕ್ಕೆ 2023-24ನೇ ಸಾಲಿನಲ್ಲಿ 11,02,695 ರೂ. ಆದಾಯ ಬಂದಿದೆ ಎಂದು ವಿವರಿಸಿದರು.
ಸಂಘದಲ್ಲಿ 400 ಸದಸ್ಯರಿಗೆ ಯಶಸ್ವಿನಿ ಯೋಜನೆ ನೋಂದಣಿಯಾಗಿದೆ. ಉಳಿದ ಸದಸ್ಯರು ಸಹ ಯಶಸ್ವಿನಿ ನೋಂದಣಿ ಮಾಡಿಸಿ, ಸರ್ಕಾರದ ಸವಲತ್ತು ಸದುಪಯೋಗ ಮಾಡಿಕೊಳ್ಳಬೇಕು. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಯಲ್ಲಿ ಉತ್ತಮ ಅಂಕ ಪಡೆದ ಸದಸ್ಯರ 18 ವಿದ್ಯಾರ್ಥಿಗಳಿಗೆ ನಗದು ಪ್ರೋತ್ಸಾಹಧನ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಂಘದ ಆವರಣದಲ್ಲಿ ಕ್ರೋಢೀಕೃತ ಬಂಡವಾಳದಿಂದ ನೂತನ ಕಟ್ಟಡ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಂಘದ ಮಾಜಿ ಅಧ್ಯಕ್ಷರಾದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಕೆಂಚಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ಪ್ರಭುಸ್ವಾಮಿ, ಸಂಘದ ಉಪಾಧ್ಯಕ್ಷ ಚಿಕ್ಕತಿಮ್ಮಯ್ಯ, ನಿರ್ದೇಶಕರಾದ ಸಿದ್ದೇಗೌಡ, ಚಿಕ್ಕೇಣಮ್ಮ, ಪಚ್ಚೇಗೌಡ, ಎಂ. ಮಹಾದೇವು, ಚಿಕ್ಕಣ್ಣೇಗೌಡ, ಹುಚ್ಚಮ್ಮ, ಬಿಳಿಗಿರಿರಂಗೇಗೌಡ, ಮಹಾಲಿಂಗೇಗೌಡ, ರೇಣುಕಮ್ಮ, ಮೇಲ್ವಿಚಾರಕ ವಿ. ಕೃಷ್ಣ, ಸಂಘದ ಮುಖ್ಯ ಕಾರ್ಯನಿರ್ವಾಹಕ ಮೂಗಶಾಂತೇಗೌಡ, ಸಿಬ್ಬಂದಿ ಎಂ. ಮಹಾದೇವು, ಮಲ್ಲಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net