ಹೈನುಗಾರಿಕೆ ಪ್ರೋತ್ಸಾಹಕ್ಕೆ ಸಾಲಸೌಲಭ್ಯ: ಕೆ.ಸತೀಶ್

arkalagudu
ಅರಕಲಗೂಡು ತಾಲೂಕಿನ ಬೈಚನಹಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ಹುಲ್ಲಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಕೆ.ಸತೀಶ್ ಮಾತನಾಡಿದರು. ರವಿಕುಮಾರ್, ಬಸವೇಗೌಡ, ಎಂ.ಎಸ್.ಆಂಜನೇಯಗೌಡ, ಎಚ್.ಬಿ.ಮಹೇಶ್, ಎಚ್.ಎಚ್.ಈರೇಗೌಡ, ದೇವೇಗೌಡ, ಎಚ್.ಎಸ್.ಹೇಮಾವತಿ, ಮರಿನಿಂಗೇಗೌಡ ಇದ್ದರು.
Published on

ಹುಲ್ಲಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ

ಅರಕಲಗೂಡು(ಬೈಚನಹಳ್ಳಿ): ಹೈನುಗಾರಿಕೆಯಲ್ಲಿ ತೊಡಗಿರುವ ರೈತ ಕುಟುಂಬಗಳನ್ನು ಆರ್ಥಿಕವಾಗಿ ಪ್ರೋತ್ಸಾಹಿಸಲು ಜಿಲ್ಲಾ ಸಹಕಾರ ಕೇಂದ್ರ (ಎಚ್‌ಡಿಸಿಸಿ) ಬ್ಯಾಂಕ್ ಹೊಸ ಯೋಜನೆ ಜಾರಿಗೆ ತಂದಿದೆ ಎಂದು ಹುಲ್ಲಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಸತೀಶ್ ಹೇಳಿದರು.


ತಾಲೂಕಿನ ಬೈಚನಹಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ಹುಲ್ಲಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಹೈನುಗಾರಿಕೆ ಪ್ರೋತ್ಸಾಹಿಸಲು ಎಚ್‌ಡಿಸಿಸಿ ಬ್ಯಾಂಕ್ ಮುಂದಾಗಿದ್ದು, ಈ ಸಂಬಂಧ ನಬಾರ್ಡ್, ಅಪೆಕ್ಸ್ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಜತೆಗೂಡಿ ಹೊಸ ಸಾಲಸೌಲಭ್ಯ ಯೋಜನೆಯನ್ನು ಜಾರಿಗೆ ತಂದಿದೆ. ಹೈನುಗಾರಿಕೆಯಲ್ಲಿ ತೊಡಗಿರುವ ಪ್ರತಿ ಕುಟುಂಬ ತಲಾ 1 ಲಕ್ಷ ರೂ. ಸಾಲ ಪಡೆಯಬಹುದಾಗಿದೆ. ಈ ಹಣದಿಂದ 2 ಎಮ್ಮೆ ಅಥವಾ 2 ಹಸು ಖರೀದಿಸಬಹುದು ಎಂದರು.


ವಿಶೇಷವಾಗಿ ಸುರುತಿ ಎಂಬ ದೇಸಿ ಎಮ್ಮೆ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಯೋಜನೆಯಡಿ ಎರಡು ಸುರುತಿ ಎಮ್ಮೆಗಳನ್ನು ಖರೀದಿಸಬಹುದು. ಈ ತಳಿಯ ಎಮ್ಮೆ 6 ರಿಂದ 8 ಲೀಟರ್ ಹಾಲು ನೀಡುತ್ತದೆ. ಪ್ರತಿ ಲೀಟರ್ ಹಾಲಿನಲ್ಲಿ ಶೇ.7ರಿಂದ 8ರಷ್ಟು ಕೊಬ್ಬಿನಂಶ ಇರುತ್ತದೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತ ಕುಟುಂಬ ತಮ್ಮ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಪಡೆಯಬಹುದಾಗಿದೆ ಎಂದು ಹೇಳಿದರು.


ಹುಲ್ಲಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕಾಗಿ ನಬಾರ್ಡ್ ನಿಂದ 40 ಲಕ್ಷ ರೂ. ಸಾಲ ಬಿಡುಗಡೆಯಾಗಿದೆ. ಆದರೆ, ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ನೂತನ ಕಟ್ಟಡ ಕೆಲಸ ಆರಂಭವಾಗಿಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net