

ಮಡಿಕೇರಿ: ಜಿಲ್ಲಾ ಅಗ್ರಣೀ ಬ್ಯಾಂಕ್ ೨೦೨೩-೨೪ ನೇ ಸಾಲಿನ ಕೊಡಗು ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಜಿ.ಪಂ.ಸಿಇಒ ವರ್ಣಿತ್ ನೇಗಿರವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ನಂತರ ಬ್ಯಾಂಕರುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಅಗತ್ಯವಿರುವ ಸಾಲ ವಿತರಿಸುವುದರ ಮೂಲಕ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವಂತೆ ಸಲಹೆ ನೀಡಿದರು. ಈ ಬಾರಿಯ ವಾರ್ಷಿಕ ಸಾಲ ಯೋಜನೆಯು ಜಿಲ್ಲೆಯ ಕೃಷಿಕರಿಗೆ ವರದಾನವಾಗಲಿದೆ ಎಂದು ಸಭೆಗೆ ತಿಳಿಸಿದರು.
ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥ ಗಂಗಾಧರ್ ನಾಯ್ಕ ಮಾತನಾಡಿ, ೨೦೨೩-೨೪ ನೇ ಸಾಲಿಗೆ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ವಯ ರೂ.೪೫೦೪ ಕೋಟಿ ಗುರಿ ನಿಗದಿಪಡಿಸಿದೆ. ಇದರಲ್ಲಿ ೭೧.೫೬ ಪ್ರತಿಶತ(ರೂ.೩೨೨೩.೯೫ ಕೋಟಿ) ಆದ್ಯತಾ ವಲಯಕ್ಕೆ ಮೀಸಲಿಟ್ಟಿದ್ದು ಅವುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ರೂ.೨೪೦೦.೫೬ ಕೋಟಿ, ಕಿರು ಮತ್ತು ಮಧ್ಯಮ ಗಾತ್ರದ ಉದ್ಯಮ ಕ್ಷೇತ್ರಕ್ಕೆ ರೂ.೬೮೯.೮೩ ಕೋಟಿ ಮತ್ತು ಇತರೆ ಆದ್ಯತಾ ವಲಯಕ್ಕೆ ರೂ.೧೩೩.೫೬ ಕೋಟಿ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಜಿಲ್ಲೆಯ ಎಲ್ಲಾ ಬ್ಯಾಂಕುಗಳು ಜನರಿಗೆ ಸಾಲ ವಿತರಿಸುವುದರ ಮೂಲಕ ನಿಗದಿಪಡಿಸಿರುವ ಗುರಿಯನ್ನು ಸಾಧಿಸಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರತಿವರ್ಷದಂತೆ ಈ ವರ್ಷವೂ ಲೀಡ್ ಬ್ಯಾಂಕ್ ವತಿಯಿಂದ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಲಾಗಿದೆ. ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿರುವುದರಿಂದ ಕೃಷಿ ಮತ್ತು ಆದ್ಯತಾ ವಲಯಕ್ಕೆ ಒತ್ತು ನೀಡುವ ಉದ್ದೇಶದಿಂದ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿ ತನು ನಂಜಪ್ಪ, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಮೇಶ್ ಬಾಬು, ವಿವಿಧ ಬ್ಯಾಂಕುಗಳ ಕ್ಷೇತ್ರೀಯ ಕಾರ್ಯಾಲಯದ ಪ್ರತಿನಿಧಿಗಳು, ಬ್ಯಾಂಕುಗಳ ಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.