

ಮಹಾಲಿಂಗಪುರ: ಕರ್ನಾಟಕ ಜಾನಪದ ಅಕಾಡೆಮಿ ಕೊಡಮಾಡುವ 2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಮಹಾಲಿಂಗಪುರದ ಜಾನಪದ ಕರಡಿ ಮಜಲು ಕಲಾವಿದ ಗಂಗಪ್ಪ ಕರಡಿ ಭಾಜನರಾಗಿದ್ದಾರೆ.
ಸುಮಾರು 70 ವರ್ಷ ವಯಸ್ಸಿನ ಗಂಗಪ್ಪ ತಮ್ಮ 15ನೇ ವಯಸ್ಸಿನಲ್ಲಿಯೇ ವಂಶ ಪಾರಂಪರ್ಯವಾಗಿ ನಡೆಸಿಕೊಂಡು ಬಂದ ಕರಡಿ ಕಲೆಯಲ್ಲಿ ತೊಡಗಿ ತಮ್ಮ ಜೀವನವನ್ನೇ ಕಲೆಗಾಗಿ ಮುಡುಪಾಗಿರಿಸಿದ್ದಾರೆ. ಮಹಾಲಿಂಗಪುರದ ಕರಡಿ ಮಜಲು ಮನೆತನದ ಕಲಾವಿದ ಮಹಾಲಿಂಗಪ್ಪ ಹಾಗೂ ಕಾಳವ್ವ ದಂಪತಿಗಳ ಪುತ್ರನಾಗಿ ಜನಿಸಿದ ಅವರು, ದೇಹ ಮಣ್ಣಿಗೆ ಜೀವ ಜನಪದಕ್ಕೆ ಎಂಬ ಜನನುಡಿಯಂತೆ ರಾಜ್ಯ ಹಾಗೂ ದೇಶದಲ್ಲಿ ಕಲೆ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.
ಕರಡಿ ಮನೆತನದವರು ಸುಮಾರು 500 ವರ್ಷಗಳಿಂದ 22 ತಲೆಮಾರುಗಳು ವಂಶ ಪಾರಂಪರ‌್ಯವಾಗಿ ಪಟ್ಟಣದ ಶ್ರೀ ಮಹಾಲಿಂಗೇಶ್ವರ ಮಠಕ್ಕೆ ತಮ್ಮ ಕರಡಿ ಕಲಾ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಮನೆತನದವರು 1882ರಲ್ಲಿ ಮುಧೋಳ ಆಸ್ಥಾನದ ಕಲಾವಿದರಾಗಿ ಸೊಲ್ಲಾಪುರ ಮಹಾರಾಜರ ಮುಂದೆ ಕಾರ್ಯಕ್ರಮ ನೀಡಿ ಬಂಗಾರದ ಪದಕ ಪಡೆದುಕೊಂಡರು. ರಾಜ್ಯದ ಏಕೀಕರಣಕ್ಕಿಂತಲೂ ಮುಂಚೆ ಯಾವುದೇ ಸಂಪರ್ಕ ಸಾಧನ ಇಲ್ಲದ ಕಾಲದಲ್ಲಿ ತಮ್ಮ ಕುಟುಂಬವನ್ನೇ ತಂಡವಾಗಿಸಿ ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿ ಮೂಲಕ ಕಾರ್ಯಕ್ರಮ ನೀಡಿ ಕರ್ನಾಟಕದ ಸಂಸ್ಕೃತಿಯನ್ನು ದೆಹಲಿಯಲ್ಲಿ ಆಗಿನ ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಗಳಿಗೆ ಪರಿಚಯಿಸಿದ್ದಾರೆ.
ಗಂಗಪ್ಪ ಅವರು ಮೈಸೂರು ರಾಜ್ಯದ ಸಂಗೀತ ನಾಟಕ ಅಕಾಡೆಮಿ ಕಾರ್ಯಕ್ರಮದಲ್ಲಿ ಶಿಕ್ಷಣ ಮಂತ್ರಿ ಎಸ್.ಆರ್. ಕಂಠಿ ಅವರಿಂದ ಬೆಳ್ಳಿಪದಕ ಪಡೆದುಕೊಂಡಿದ್ದಾರೆ. ದೇಶಾದ್ಯಂತ ಅನೇಕ ಕಾರ್ಯಕ್ರಮಗಳಲ್ಲಿ ಗಣ್ಯರ ಸಮ್ಮುಖದಲ್ಲಿ ತಮ್ಮ ಕಲೆ ಪ್ರದರ್ಶಿಸಿ ಅಪಾರ ಕಲಾಭಿಮಾನಿಗಳ ಮನ್ನಣೆಗೆ ಪಾತ್ರರಾಗಿರುವ ಗಂಗಪ್ಪ ಅವರಿಗೆ ಕರ್ನಾಟಕ ಜಾನಪದ ಅಕಡೆಮಿ ಗೌರವ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ.